ಮಡಿಕೇರಿ: ಉದಯೋನ್ಮುಖ ಪ್ರತಿಭಾನ್ವಿತ ಯುವತಿ ಡಾ. ಕಲಿಯಂಡ ಚರಿಷ್ಮ ಆಸ್ಟ್ರೇಲಿಯಾದ ಸಿಡ್ನಿಯ ಲಿವರ್ ಪೂಲ್ ಸಿಟಿಯ ಕೌನ್ಸಿಲರ್ ಆಗಿ ನೇಮಕಗೊಳ್ಳುವ ಮೂಲಕ ಕೊಡಗಿಗೆ ಹೆಮ್ಮೆ ತಂದಿದ್ದಾರೆ.
ಇವತ್ತು ಸಿಡ್ನಿಯ ಲಿವರ್ ಪೂಲ್ ಸಿಟಿಯ ಕೌನ್ಸಿಲರ್ ಆಗಿರುವ ಡಾ. ಚರಿಷ್ಮ ಅವರು ಮೂಲತಃ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕಲಿಯಂಡ ಮಾದಪ್ಪ (ಜಯ) ಮತ್ತು ಭಾನುಮತಿ ದಂಪತಿ ಪುತ್ರಿ. ಸದ್ಯ ಎಲ್ಲ ಕುಟುಂಬ ಸದಸ್ಯರು ಸಿಡ್ನಿಯ ಲಿವರ್ ಪೂಲ್ ಸಿಟಿಯಲ್ಲಿ ನೆಲೆಸಿದ್ದಾರೆ.
ಕಲಿಯಂಡ ಮಾದಪ್ಪ ಮತ್ತು ಭಾನುಮತಿ ಕುಟುಂಬ ಈ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದ ಸಂದರ್ಭ 1987ರ ಡಿಸೆಂಬರ್ 2 ರಂದು ಚರಿಷ್ಮ ಜನಿಸಿದ್ದರು. ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದರೂ, ಆ ನಂತರದ ವರ್ಷಗಳ ಬಳಿಕ ಮಾದಪ್ಪ ಕುಟುಂಬ ವರ್ಗದವರೆಲ್ಲರೂ ಸಿಡ್ನಿಯ ಲಿವರ್ ಪೂಲ್ ಸಿಟಿಗೆ ತೆರಳಿ ಅಲ್ಲಿ ನೆಲೆಸಿದ್ದಾರಲ್ಲದೆ, ಲಿವರ್ ಪೂಲ್ ಸಿಟಿಯ ಪೌರತ್ವವನ್ನು ಪಡೆದಿದ್ದರು.
ಇದರ ಮಧ್ಯೆ ಸಿಡ್ನಿಯಲ್ಲಿ 2 ವರ್ಷಗಳ ಹಿಂದೆ ಲಿವರ್ ಪೂಲ್ ಸಿಟಿಯ ಚುನಾವಣೆಗೆ ಚರಿಷ್ಮ ಅವರು ಲೇಬರ್ ಪಾರ್ಟಿಯಿಂದ ಸ್ಪರ್ಧಿಸಿ ಕೆಲವೇ ಕೆಲವು ಮತಗಳ ಅಂತರದಿಂದ ಸೋಲನ್ನು ಅನುಭವಿಸಬೇಕಾಯಿತು. ಆ ನಂತರದ ದಿನಗಳಲ್ಲಿ ಚರಿಷ್ಮ ಅವರನ್ನು ಲೇಬರ್ ಪಾರ್ಟಿಯ ಉನ್ನತ ಮಟ್ಟದ ಮುಖಂಡರುಗಳು ಸರ್ವಾನುಮತದಿಂದ ಡಾ. ಚರಿಷ್ಮ ಅವರನ್ನು ಕೌನ್ಸಿಲರ್ ಆಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಚರಿಷ್ಮಾ ಅವರನ್ನು ಲೋಕಾಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಪಕ್ಷದ ಮುಖಂಡರುಗಳು ಲೆಕ್ಕಚಾರ ಹಾಕಿಕೊಂಡಿದ್ದಾರೆ.
ಡಾ. ಚರಿಷ್ಮ ಅವರು ಲಿವರ್ ಪೂಲ್ ಸಿಟಿಯಲ್ಲಿ ಸೈಕಿಯಾಟ್ರಿಸ್ಟ್ ವೈದ್ಯೆಯಾಗಿ ಮತ್ತು ಥೆರಾಪಿಸ್ಟ್ ಆಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಚರಿಷ್ಮಾ ಅವರನ್ನು ಮತ್ತೆ ಅಲ್ಲಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಪಕ್ಷ ಲೆಕ್ಕಚಾರ ಹಾಕುತ್ತಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಸಿಟಿಯ ಮೇಯರ್ ಆಗುವ ಸಂಭವವಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.