ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ಭಾರತೀಯ ಜನತಾ ಪಕ್ಷ ಫೆ. 20ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರ ಹಿಂದಿನ ಕೇಂದ್ರದ ಯುಪಿಎ ಸರಕಾರದ ಹಾದಿಯಲ್ಲೇ ಸಾಗುತ್ತಿದೆ. ನಂತರ ಚುನಾವಣೆಯಲ್ಲಿ ಯುಪಿಎ ಪತನವಾದಂತೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಸರ್ವನಾಶ ಆಗಲಿದೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಅವರ ಆಪ್ತ ಶಾಸಕ ಗೋವಿಂದರಾಜು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 162 ಕೋಟಿ ಅಕ್ರಮ ಆಸ್ತಿ, 12 ಕೆ.ಜಿ ಚಿನ್ನ ಹಾಗೂ 42 ಲಕ್ಷ ರುಪಾಯಿ ನಗದು ದೊರೆತಿದೆ. ಅಲ್ಲದೆ ಇದರ ಜೊತೆಗೆ ಒಂದು ಡೈರಿಯೂ ಸಿಕ್ಕಿದ್ದು, ಅದರಲ್ಲಿ ಹೈಕಮಾಂಡ್ಗೆ ಸಾವಿರ ಕೋಟಿ ಕಪ್ಪ ನೀಡಿರುವ ಬಗ್ಗೆ ದಾಖಲೆ ಇರುವುದಾಗಿ ತಿಳಿದುಬಂದಿದೆ. ತಮ್ಮ ಪಕ್ಷದ ಮುಖಂಡರ ಬಳಿ ಇಷ್ಟೆಲ್ಲಾ ಅಕ್ರಮ ಆಸ್ತಿ ಪತ್ತೆಯಾಗಿದ್ದರೂ ಕೂಡ ಮುಖ್ಯಮಂತ್ರಿಗಳು ಅವರ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅವರ ಸಮರ್ಥನೆಗೆ ನಿಂತಿದ್ದಾರೆ. ಇದು ಕಾಂಗ್ರೆಸ್ ಸರಕಾರ ನಿರ್ಭೀತಿಯಿಂದ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಕೈಗೆತ್ತಿಕೊಳ್ಳದಂತೆ ರಾಷ್ಟ್ರೀಯ ಹಸಿರು ಪೀಠ ತಡೆಯಾಜ್ಞೆ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ 65 ಕೋಟಿ ಲಂಚ ಪಡೆದು ತರಾತುರಿಯಲ್ಲಿ ಯೋಜನೆ ಜಾರಿಗೆ ಮುಂದಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಬರದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಬದಲು 4 ನಿಮಿಷ ಸಮಯ ಉಳಿಸಲು ಸಾವಿರಾರು ಕೋಟಿ ತೆರಿಗೆ ಹಣವನ್ನು ಪೋಲು ಮಾಡುವುದು ಎಷ್ಟು ಸರಿ ಎಂದು ತೇಜಸ್ವಿನಿ ಸರ್ಕಾರದ ಕ್ರಮವನ್ನು ಪ್ರಶ್ನೆ ಮಾಡಿದರು.
ದೇಶದಾದ್ಯಂತ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಕರ್ನಾಟಕ ಮಾತ್ರವೇ ಕಾಂಗ್ರೆಸ್ ಆಡಳಿತವಿರುವ ಏಕೈಕ ದೊಡ್ಡ ರಾಜ್ಯವಾಗಿದೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಹಣ ಪೂರೈಸಲು ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವ ರಾಜ್ಯ ಸರ್ಕಾರ ಹೈಕಮಾಂಡ್ ಗೆ ಹಣ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಕಾಂಗ್ರೆಸ್ಸಿಗರಿಗೆ ಮತ್ತೊಂದು ಅವಧಿಗೆ ಅಧಿಕಾರ ನೀಡಿದಲ್ಲಿ ಇಡೀ ರಾಜ್ಯವನ್ನೇ ಕೊಳ್ಳೆ ಹೊಡೆದು, ರಾಜ್ಯವನ್ನು ಅಭಿವೃದ್ಧಿಯಲ್ಲಿ ದಶಕಗಳಷ್ಟು ಹಿಂದೆ ತಳ್ಳಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಹಗರಣಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫೆ.20ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.