ಚಿಕ್ಕಮಗಳೂರು: ಬೆಳವಾಡಿ ದೊಡ್ಡ ಕೆರೆಗೆ ನೀರು ಹರಿಸುವ ಕಾಮಗಾರಿ ಕಳೆದ 15 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಕೂಡಲೇ ಕಾಮಗಾರಿ ಮುಕ್ತಾಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರಗಡ ಕುಡಿಯುವ ನೀರಿನ ಹೋರಾಟ ಸಮಿತಿ ಪದಾಧಿಕಾರಿಗಳು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜುಗೆ ಮನವಿ ಸಲ್ಲಿಸಿದ್ದಾರೆ.
ಈ ತನಕ ಬಂದಿರುವ ಎಲ್ಲಾ ಸರ್ಕಾರ ಈ ಯೋಜನೆಗೆ ಇಲ್ಲಿಯವರೆಗೆ ಒಟ್ಟು 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕಳೆದ ಹತ್ತಾರು ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೇ ರೈತರ ಕನಸು ಭಗ್ನವಾಗಿದೆ. ಬೆಳವಾಡಿ ದೊಡ್ಡಕೆರೆಗೆ ಸಂಬಂಧಿಸಿದಂತೆ ಹಾಗೂ ಹಳೇಬೀಡು ಕೆರೆಗೂ ಸಂಬಂಧಿಸಿದಂತೆ ರಣಘಟ್ಟ ಯೋಜನೆಯನ್ನು ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಹಳೇಬೀಡು, ಬೆಳವಾಡಿ, ದೇವನೂರು, ಕಡೂರು ಭಾಗದ ರೈತರ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಸಚಿವರು ಮಾತನಾಡಿ, ರಣಘಟ್ಟ ಹಾಗೂ ಕರಗಡ ವಿಚಾರವನ್ನು ಪ್ರಸ್ತಾಪಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಶಾಶ್ವತ ಬರಗಾಲವನ್ನು ಗಮನಿಸಿ ಈ ಭಾಗಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಮುಗಿಸುವ ಭರವಸೆ ನೀಡಿದ ಅವರು, ಕಾಮಗಾರಿಗೆ ಪೂರಕವೆಂಬಂತೆ ಎತ್ತಿನಹೊಳೆ ಯೋಜನೆಯಲ್ಲಿ ಹಳೇಬೀಡು, ಬೆಳವಾಡಿ ಭಾಗಕ್ಕೆ ನೀರು ಹರಿಸುವ ಯಾವುದೇ ಪ್ರಸ್ತಾಪವಿರಲಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಈಗ ಈ ಭಾಗಕ್ಕೂ ಕೂಡ ನೀರು ಹರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ತೆಂಗು, ಅಡಿಕೆ ತೋಟಗಳು ನಾಶವಾಗಿದ್ದು, ರೈತರು ಪಶು ಸಾಕಣೆ ಮಾಡಿಕೊಂಡು ಬದುಕು ನಿರ್ವಹಿಸುತ್ತಿದ್ದಾರೆ.
ಈಗ ಈ ಬರಗಾಲದಿಂದ ಬದುಕಿಗೂ ಸಂಕಷ್ಟ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇನ್ನೆರಡು ತಿಂಗಳೊಳಗೆ ಹೋರಾಟ ಸಮಿತಿಯ ಜೊತೆ ಚರ್ಚಿಸಿ ಮುಂದಿನ ಕಾಮಗಾರಿಗೆ ಬೇಕಾಗುವ ಸರ್ಕಾರದ ಸಹಾಯವನ್ನು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.