ತಿ.ನರಸೀಪುರ: ಅಕ್ರಮ ಮರಳು ಸಾಗಾಣಿಕೆ ಹಾಗೂ ಅನಧಿಕೃತ ಮದ್ಯ ಮಾರಾಟಕ್ಕೆ ಸಹಕಾರ ನೀಡುತ್ತಿರುವ ಮರಳು ದಂಧೆಕೋರರು, ಮದ್ಯದಂಗಡಿ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ನಿದ್ರಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ. ಇದೂ ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ.ಡಿ ಚನ್ನಣನವರ್ ಶಪಥ ಮಾಡಿದರು.
ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಮರಳು ಮಾಫಿಯಾ ಹೆಮ್ಮರವಾಗಿ ಬೆಳೆದಿದೆ. 2013 ರಿಂದ 2016 ರವರಗೆ ಸುಮಾರು 600 ಪ್ರಕರಣಗಳು ದಾಖಲಾಗಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇದರಲ್ಲಿ ಶೇ 70ರಷ್ಟು ಮಂದಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಮರಳು ಮಾಫಿಯಾದಲ್ಲಿ ತೊಡಗಿದ್ದವರ ವಿರುದ್ದ ಪ್ರಕರಣ ದಾಖಲಾಗಿ ಮುಚ್ಚಿ ಹೋಗಿದ್ದರೂ ಆ ಪ್ರಕರಣಕ್ಕೆ ಮರು ಜೀವ ನೀಡಿ ತನಿಖೆ ನಡೆಸಲಾಗುವುದು. ಪ್ರಕರಣದಲ್ಲಿ ಆರೋಪ ಸಾಬೀತುಗೊಂಡರೆ ಅವರು ಎಷ್ಟೇ ಪ್ರಭಾವಿಗಳಾದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ಗಡಿ ಪಾರು ಮಾಡುವುದಾಗಿ ಹೇಳಿದರು.
ಆಶ್ರಯ ಮನೆ ಮತ್ತು ಶೌಚಾಲಯ ನಿರ್ಮಿಸುವ ಫಲಾನುಭವಿಗಳಿಗೆ ಮರಳನ್ನು ಉಪಯೋಗಿಸಿಕೊಳ್ಳಲು ಎತ್ತಿನಗಾಡಿಗಳಲ್ಲಿ ಮರಳು ಸಾಗಾಣಿಕೆ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೆ ಇದಕ್ಕೆ ಅವಕಾಶ ನೀಡುವುದಿಲ್ಲ. ಅಂತಹ ಫಲಾನುಭವಿಗಳು ಪುರಸಭೆ ಮುಖಾಂತರ ಮರಳಿಗಾಗಿ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಠಾಣೆಯಲ್ಲಿ ಜಪ್ತಿ ಮಾಡಿರುವ ಮರಳನ್ನು ಕಾನೂನು ಚೌಕಟ್ಟಿನಲ್ಲಿ ರಿಯಾಯಿತ ದರದಲ್ಲಿ ವಿತರಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಅಕ್ರಮ ಮದ್ಯ ಮಾರಾಟದಿಂದಾಗಿ ದಿನದಿಂದ ದಿನಕ್ಕೆ ಠಾಣೆಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲೂಕಿನಾದ್ಯಂತ ಗ್ರಾಮಗಳಲ್ಲಿ ಅಂಗಡಿ, ಮುಂಗಟ್ಟು, ಹೊಟೇಲ್ ಗಳಲ್ಲಿ ಅಕ್ರಮ ಮದ್ಯ ಸಿಗಲು ಕಾರಣರಾದ ಮದ್ಯದಂಗಡಿ ಮಾಲೀಕರು, ಸರಬರಾಜು ಮಾಡುವವರ ವಿರುದ್ದ ಪ್ರಕರಣ ದಾಖಲಿಸಿ ಅವರ ಲೈಸೆನ್ಸ್ ರದ್ದುಗೊಳಿಸುವ ಮೂಲಕ ಆಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದೆಂದರು.