News Kannada
Sunday, January 29 2023

ಕರ್ನಾಟಕ

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನು ವಜಾಗೊಳಿಸಲು ಒತ್ತಾಯ

Photo Credit :

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನು ವಜಾಗೊಳಿಸಲು ಒತ್ತಾಯ

ಮಡಿಕೇರಿ: ಕೊಡವ ಭಾಷೆಯನ್ನಾಡುವ ವಿವಿಧ ಸಮುದಾಯಗಳ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಡೆಮಿ ಅಧ್ಯಕ್ಷರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಫೆ. 27 ರವರೆಗೆ ಕಾದು ನೋಡಿ ನಂತರ ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಕಾಡೆಮಿ ಕಛೇರಿ ಎದುರು ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

‘ಕುಡಿಯರ ಮಂದ್ ನಮ್ಮೆ’ ಆಯೋಜನೆಗೆ 1 ಲಕ್ಷ ಅನುದಾನ ಒದಗಿಸುವಂತೆ ಅಕಾಡೆಮಿಗೆ ಕುಡಿಯರ ಸಮೂಹದ ಪರವಾಗಿ ಈ ಹಿಂದೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ವಿಚಾರಿಸಲು ಅಕಾಡೆಮಿ ಕಛೇರಿಗೆ ತೆರಳಿದ ಸಂದರ್ಭ ಅಧ್ಯಕ್ಷರು, ನಿನಗೆ ಕಛೇರಿಗೆ ಬರುವ ಯೋಗ್ಯತೆ ಇಲ್ಲವೆಂದು ಅಗೌರವ ತೋರಿದ್ದಾರೆ. ತಾನು ಸಲ್ಲಿಸಿದ್ದ ಮನವಿಯನ್ನು ಎಸೆದು, ವರ್ಷದ ಹಿಂದೆ ನೀನು ಅಧ್ಯಕ್ಷರ ವಿರುದ್ಧ ಹೇಳಿಕೆ ನೀಡಿದ್ದೀಯ. ಇದರಿಂದ ನಿಮಗೆ ಯಾವುದೇ ಅನುದಾನವಾಗಲಿ, ಮರ್ಯಾದೆಯಾಗಲಿ ನೀಡುವುದಿಲ್ಲವೆಂದು ಗದರುವ ಮೂಲಕ ಕಛೇರಿಯಿಂದ ಹೊರಗೆ ಹೋಗು ಎಂದು ಹೇಳುವ ಮೂಲಕ ಅವಮಾನಿಸಿದ್ದಾರೆ ಎಂದು ಕುಡಿಯರ ಮುತ್ತಪ್ಪ ಆರೋಪಿಸಿದರು.

ಅಧ್ಯಕ್ಷರ ಈ ಕ್ರಮದ ವಿರುದ್ಧ ನಗರ ಪೊಲೀಸ್ ಠಾಣೆ ಸೇರಿದಂತೆ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡಿದ್ದು, ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ತನಿಖೆ ನಡೆಸಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ 2.50 ಕೋಟಿ ರೂ.ಗಳಷ್ಟು ಅನುದಾನವಿದೆ. ಇದರಲ್ಲಿ ಶೇ.25 ರಷ್ಟು ಹಣವನ್ನು ಪರಿಶಿಷ್ಟ ಜಾತಿಗೆ ಒಳಪಟ್ಟ ಕುಡಿಯ, ಮೇದ, ಕೆಂಬಟ್ಟಿ ಸಮೂಹದ ಸಂಸ್ಕ್ರತಿಯ ಬೆಳವಣಿಗೆಗೆ ಬಳಸಬೇಕು. ಆದರೆ, ಎಷ್ಟು ಅನುದಾನವನ್ನು ಈ ಅಧ್ಯಕ್ಷರು ಬಳಸಿದ್ದಾರೆ ಎಂದು ಪ್ರಶ್ನಿಸಿದ ಕುಡಿಯರ ಮುತ್ತಪ್ಪ ಕೊಡವ ಭಾಷಿಕ ಇತರೆ ಸಮುದಾಯಗಳ ಭಾಷಾ, ಸಂಸ್ಕ್ರತಿ, ಆಚಾರ ವಿಚಾರಗಳ ಬೆಳವಣಿಗೆಗೆ ಅಕಾಡೆಮಿಯಿಂದ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸದೆ, ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ತರಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಭಾಷೆಯನ್ನಾಡುವ ಇತರೆ ಸಮುದಾಯಗಳನ್ನು ಕಡೆಗಣಿಸಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಅಕಾಡೆಮಿ ಅಧ್ಯಕ್ಷರು ಸಾರ್ವಜನಿಕ ಚರ್ಚೆಗೆ ಬರಬೇಕು. ಕೊಡವ ಭಾಷಿಕ ಇತರೆ ಸಮುದಾಯಗಳಿಗೆ ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವ ವಿವರವನ್ನು ನೀಡಬೇಕೆಂದರು.

ತನಗೆ ಯೋಗ್ಯತೆ ಇಲ್ಲದವನೆಂದು ಹೇಳಿರುವ ಅಕಾಡೆಮಿ ಅಧ್ಯಕ್ಷರು ನನ್ನೊಂದಿಗೆ ಕೊಡವ ಜಾನಪದ ‘ದೇಶ ಕಟ್ಟ್ ಪಾಟ್’ ಸ್ಪರ್ಧೆಗೆ ಬರಲಿ ಇಲ್ಲವೆ ನಮ್ಮ ಮಕ್ಕಳೊಂದಿಗೆ ಸ್ಪರ್ಧೆಗಿಳಿಯಲಿ ನಮ್ಮ ಯೋಗ್ಯತೆ ಏನೆಂದು ತೋರಿಸಿಕೊಡುವುದಾಗಿ ಸವಾಲೆಸೆದ ಕುಡಿಯರ ಮುತ್ತಪ್ಪ, ಅಕಾಡೆಮಿ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುವ ಕೊಡವ ಮತ್ತು ಇತರೆ ಸಮುದಾಯಗಳ ತಂಡಗಳ ಸಂಭಾವನೆಯಲ್ಲೂ ತಾರತಮ್ಯವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

See also  ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಿರವಾಸೆ-ಸುಗುಡುವಾನಿ ಗ್ರಾಮಸ್ಥರಿಂದ ಪ್ರತಿಭಟನೆ

ಸುದ್ದಿಗೋಷ್ಠಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎ.ಸೋಮಯ್ಯ, ಗೋಪಮ್ಮ ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು