ಚಿಕ್ಕಮಗಳೂರು: ಜೆಡಿಎಸ್ ನಿಂದ ಅಮಾನತಾಗಿರುವ ಶಾಸಕರು ಸೇರಿದಂತೆ 15 ಮಂದಿ ಶಾಸಕರು ಕಾಂಗ್ರೆಸ್ಸಿಗೆ ಹೋಗುವುದಾಗಿ ಜಮೀರ್ ಅಹಮದ್ ಹೇಳಿಕೆಯು ಸುಳ್ಳು. ಅದೊಂದು ಬ್ಲಾಕ್ಮೇಲ್ ತಂತ್ರವಾಗಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಹಾಗೂ ಶಾಸಕ ಬಿ.ಬಿ.ನಿಂಗಯ್ಯ ಆರೋಪಿಸಿದ್ದಾರೆ.
ಜಮೀರ್ ಅಹಮದ್ ಪ್ರತಿದಿನ ತಮ್ಮನ್ನು ಪಕ್ಷಕ್ಕೆ ಮರು ಸೇರ್ಪಡೆಗೊಳಿಸಬೇಕೆಂಬ ಸಂದೇಶವನ್ನು ತಮ್ಮ ಪಕ್ಷಕ್ಕೆ ಕಳುಹಿಸುತ್ತಿದ್ದಾರೆ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದಿರುವುದರಿಂದ ಹೀಗೆ ಬ್ಲಾಕ್ಮೇಲ್ ಮಾಡುವ ಕಾರ್ಯಕ್ಕೆ ಅವರು ಮುಂದಾಗುತ್ತಿದ್ದಾರೆ. ರಾಜ್ಯಸಭೆಗೆ ತಮ್ಮ ಪಕ್ಷದ ಅಭ್ಯರ್ಥಿ ಇರುವಾಗಿ ಅಮಾನತಾಗಿರುವ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ ಎಂದು ದೂರಿದರು.
ತಮ್ಮ ಪಕ್ಷ ಅಭ್ಯರ್ಥಿಯಾಗಿಸಿದ್ದು ಅಲ್ಪಸಂಖ್ಯಾತರನ್ನು. ಜಮೀರ್ ಅಹಮದ್ ಕೂಡ ಅಲ್ಪಸಂಖ್ಯಾತರು. ಆದರೆ ಅವರು ತಮ್ಮ ಪಕ್ಷದ ಅಭ್ಯರ್ಥಿ ಬದಲು ವೈಯಕ್ತಿಕ ಲಾಭಕ್ಕಾಗಿ ಬೇರೆ ಪಕ್ಷಕ್ಕೆ ಮತ ನೀಡಿದ್ದರು. ಅವರಿಗೆ ಯಾವುದೇ ಸಿದ್ಧಾಂತವಿಲ್ಲ. ಜಮೀರ್ ಅಹಮದ್ 2 ಬಾರಿ ಜೆಡಿಎಸ್ ನಿಂದ ಶಾಸಕರಾಗಿ ಸಚಿವರಾಗಿದ್ದರು ಎಂದ ಅವರು, ಕುಮಾರಸ್ವಾಮಿ ಹೇಳಿದ್ದರಿಂದ ತಾವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದಾಗಿ ಜಮೀರ್ ಅಹಮದ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ನಿಂಗಯ್ಯ, ಜೆಡಿಎಸ್ ಅಭ್ಯರ್ಥಿ ಆಯ್ಕೆ ಮಾಡಿ ಕಣಕ್ಕಿಸಿರುವುದೇ ಕುಮಾರಸ್ವಾಮಿ. ಅವರು ಹೇಗೆ ಬೇರೆ ಅಭ್ಯರ್ಥಿ ಪರ ಮತ ಚಲಾಯಿಸಲು ಹೇಳುತ್ತಾರೆ ಎಂದು ಮರು ಪ್ರಶ್ನಿಸಿದರು.