ಮೈಸೂರು: ಎಲ್ಲರೂ ಸೌಹಾರ್ಧತೆಯಿಂದ ಬದುಕಬೇಕು ಅದುಬಿಟ್ಟು ಧರ್ಮ, ಜಾತಿ, ವರ್ಣದ ಹೆಸರಿನಲ್ಲಿ ಶಾಂತಿ ಕದಡುವ ಕೆಲಸಕ್ಕೆ ತಕ್ಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣನವರ್ ತಿಳಿಸಿದರು.
ಬನ್ನೂರು ಪಟ್ಟಣದ ಪುರಸಭೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಯಾರು ತಾವು ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಯಾವುದೇ ಜಾತಿಯಾದರೂ ಎಲ್ಲರ ನಡುವೆ ಸಾಮರಸ್ಯ ಪ್ರೀತಿಯಿಂದ ಹೋಗಬೇಕು. ಎಲ್ಲಿಯವರೆಗೂ ಜನರ ನಡುವೆ ಪ್ರೀತಿ ವಿಶ್ವಾಸ ಇರುತ್ತದೋ ಅಲ್ಲಿಯವರೆಗೂ ಯಾವುದೇ ರೀತಿಯ ಗಲಾಟೆಗಳಿಗೆ ಆಸ್ಪದ ಇರುವುದಿಲ್ಲ ಎಂದು ತಿಳಿಸಿದರು.
ಲಾಠಿ ಛಾರ್ಜ್ ಮಾಡುವುದು ಪಾಪ ಎಂದ ಅವರು ಅಂತಹ ಪಾಪಕ್ಕೆ ಅವಕಾಶ ನೀಡಬಾರದೆಂದು ತಿಳಿಸಿದ ಅವರು ಎಲ್ಲರೂ ಒಟ್ಟಾಗಿ ಹಬ್ಬ ಹರಿದಿನಗಳನ್ನು ಮಾಡುವಂತೆ, ಯುವಕರು ದುಶ್ಚಟಗಳಿಗೆ ಒಳಗಾಗದೇ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಗ್ರಾಮಾಂತರ ಪ್ರದೇಶದ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುವುದನ್ನು ತಪ್ಪಿಸುವಂತೆ ಸಾರ್ವಜನಿಕರು ಮಾಡಿದ ಮನವಿಗೆ ಸ್ಪಂದಿಸಿದ ಅವರು ಇನ್ನು ಮುಂದಿನ ದಿನಗಳಲ್ಲಿ ಪರವಾನಗಿ ಇಲ್ಲದ ಅಂಗಡಿಗಳಿಗೆ ಮದ್ಯವನ್ನು ಸರಬರಾಜು ಮಾಡುವ ಅಂಗಡಿಯ ಮಾಲೀಕರಿಗೆ ಕೇಸ್ ಅನ್ನು ದಾಖಲಿಸಿ, ನಂತರ ಅವರ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಹಾಗೆಯೇ ಬನ್ನೂರಿನ ಕಾವೇರಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಬಸ್ ನಿಲ್ದಾಣದ ಬಳಿಯಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಸೋಮವಾರದಿಂದಲೇ ಹೆಲ್ಮೆಟ್ ಹಾಕದೆ ದ್ವಿಚಕ್ರ ಸವಾರಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜೊತೆಗೆ 18 ವರ್ಷ ಪೂರೈಸದೇ ದ್ವಿಚಕ್ರ ಓಡಿಸುವ ಹುಡುಗ ಹುಡುಗಿಯರ ಪೋಷಕರ ಮೇಲೆ ದೂರು ದಾಖಲಿಸಲಾಗುವುದು ಇದಕ್ಕೆ ಯಾರು ಶಿಫಾರಸ್ಸು ಮಾಡಬಾರದೆಂದು ತಿಳಿಸಿದರು.
ಕೆರೆ ಕಾಲುವೆಯಲ್ಲಿ ಮರಳು ತೆಗೆಯಲು ಅವಕಾಶವನ್ನು ಮಾಡಿಕೊಡುವಂತೆ ಮಾಡಿದ ಮನವಿಯನ್ನು ತಳ್ಳಿ ಹಾಕಿದ ಅವರು ರಾಜ್ಯದಲ್ಲಿ ಹೆಚ್ಚಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದದ್ದು ಮೈಸೂರು ಜಿಲ್ಲೆಯಲ್ಲಿ. ಒಮ್ಮೆ ಕೆರೆ ಕಾಲುವೆಯಲ್ಲಿ ಮರಳು ತೆಗೆಯಲು ಅವಕಾಶ ಮಾಡಿಕೊಟ್ಟರೆ ಪುನಃ ಮರಳುದಂಧೆ ಆರಂಭವಾಗುತ್ತದೆ. ಯಾವುದೇ ಕಾರಣಕ್ಕೂ ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲ. ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಎಂಸ್ಯಾಂಡ್ ದೊರೆಯುವ ಸ್ಥಳದ ಬಗ್ಗೆ ತಿಳಿಸಲಾಗುವುದೆಂದು ತಿಳಿಸಿದರು.