ಚಾಮರಾಜನಗರ: ಶನಿವಾರ ಹಗಲು ಬಂಡೀಪುರ ಅರಣ್ಯಕ್ಕೆ ಬೆಂಕಿಯಿಟ್ಟು ಅರಣ್ಯ ಸಿಬ್ಬಂದಿ ಸಜೀವ ದಹನಗೊಂಡ ಪ್ರಕರಣದ ಬೆನ್ನಲ್ಲೇ ಭಾನುವಾರ ಬೆಳಗ್ಗಿನ ಜಾವ ಸುಮಾರು ಹದಿನೆಂಟು ದಶಕಗಳನ್ನು ಕಂಡ ಐತಿಹಾಸಿಕ ಚಾಮರಾಜೇಶ್ವರ ಬ್ರಹ್ಮರಥಕ್ಕೆ ಬೆಂಕಿಯಿಟ್ಟು ಕಿಡಿಗೇಡಿಗಳು ವಿಕೃತಿಯನ್ನು ಮೆರೆದಿದ್ದಾರೆ. ಇದರಿಂದ ಚಾಮರಾಜೇಶ್ವರ ಬ್ರಹ್ಮರಥ ಸುಟ್ಟು ಹೋಗಿದೆ.
ಈ ಘಟನೆಯಿಂದ ಚಾಮರಾಜನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಕೃತ್ಯವನ್ನು ಖಂಡಿಸಿ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಆಗ್ರಹಿಸಿ ಫೆ.20ರಂದು ಚಾಮರಾಜನಗರ ಬಂದ್ ಗೆ ಕರೆ ನೀಡಲಾಗಿದೆ.
ಚಾಮರಾಜನಗರದ ಇತಿಹಾಸ ಪ್ರಸಿದ್ದ ಶ್ರೀಚಾಮರಾಜೇಶ್ವರ ರಥಕ್ಕೆ ಭಾನುವಾರ ಮುಂಜಾನೆ ಗಂಟೆಯ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳದವರು ಸಕಾಲಕ್ಕೆ ಆಗಮಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಯಿತು.
ಚಾಮರಾಜೇಶ್ವರ ದೇವಾಲಯ ಆವರಣದ ಮುಂಭಾದಲ್ಲಿ ನಿಲ್ಲಿಸಲಾಗಿದ್ದ ಬ್ರಹ್ಮ ರಥಕ್ಕೆ ಮಟ್ಟಾಳೆ ಗರಿಯಿಂದ ಮುಚ್ಚಲಾಗಿತ್ತು. ಆದರೆ ಮುಂಜಾನೆ ಒಂದು ಘಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದನ್ನು ಕಂಡ ಸಿಂಡಿಕೇಟ್ ಬ್ಯಾಂಕ್ ಎಟಿಎಂ ಸಿಬ್ಬಂದಿ ಪಟ್ಟಣ ಪೊಲೀಸ್ ಠಾಣೆಗೆ ತಿಳಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದರು.
ರಥಕ್ಕೆ ಹಾಕಲಾಗಿದ್ದ ಮಟ್ಟಾಳೆ ಹೊದಿಕೆಯು ಸಂಪೂರ್ಣವಾಗಿ ಭಸ್ಮವಾಗಿದ್ದು, ಇದು ಆಕಸ್ಮಿಕವೋ ಅಥವಾ ಉದ್ದೇಶಿತ ಕೃತ್ಯವೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪುರಂದರ ಮತ್ತು ದೇವಾಲಯ ಕಾರ್ಯನಿರ್ವಹಣಾಧಿಕಾರಿ ಮಂಜೇಶ್ ಹಾಗೂ ಪೊಲೀಸ್ ಡಿಎಸ್ಪಿ ಗಂಗಾಧರಸ್ವಾಮಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ಪುರಂದರ ದೂರು ನೀಡಿದ್ದಾರೆ. ದೇವಾಲಯದ ಅವರಣದಲ್ಲಿ ಹಾಕಿರುವ ಸಿಸಿ ಕ್ಯಾಮರಾಗಳು ಕೆಲಸ ಮಾಡದೇ ಇರುವುದು ರಥಕ್ಕೆ ಬೆಂಕಿ ಬಿದ್ದ ಪ್ರಕರಣ ಬೇಧಿಸಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನೂ ರಥದ ಹಿಂಭಾಗ ಸಿಂಡಿಕೇಟ್ ಬ್ಯಾಂಕ್ ಮತ್ತು ಭಾರತೀಯ ಸಹಕಾರ ಬ್ಯಾಂಕ್ ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಚಿತ್ರೀಕರಣವಾಗಿದ್ದರೆ ಅವುಗಳ ಮೂಲಕ ಪ್ರಕಣರವನ್ನು ಭೇದಿಸಲು ಸಾಧ್ಯವಾಗಬಹುದೇನೋ?
ಚಾಮರಾಜನಗರದ ರಥಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಕೋಮುವಾರು ಸಭೆ ಸೇರಿದ ಮುಖಂಡರುಗಳು ಘಟನೆಯನ್ನು ಖಂಡಿಸಿ ಸೋಮವಾರ ಚಾಮರಾಜನಗರ ಬಂದ್ ಗೆ ಕರೆ ನೀಡಲು ನಿರ್ಧರಿಸಿದ್ದಾರೆ.
ಚಾಮರಾಜನಗರದ ಆಷಾಡ ಮಾಸದ ಖ್ಯಾತಿಯ ಚಾಮರಾಜೇಶ್ವರ ಬ್ರಹ್ಮ ರಥಕ್ಕೆ ವಿಗ್ನ ತರುವ ಉದ್ದೇಶದಿಂದ ಕಿಡಿಗೇಡಿಗಳು ಸಂಚು ರೂಪಿಸಿ ರಥಕ್ಕೆ ಬೆಂಕಿ ಹಾಕಿದ್ದು ಸ್ಪಷ್ಟವಾಗಿದ್ದು, ಪ್ರಕರಣದ ಹಿಂದೆ ಯಾರಿದ್ದಾರೆಂಬುದು ಬಯಲಿಗೆ ಬರಬೇಕು ಹಾಗೂ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ.
ನಗರದ ಹಿಂದೂ ಸಂಘಟನೆಗಳು ಮತ್ತು ವಿವಿಧ ಕೋಮುವಾರು ಮುಖಂಡರುಗಳು ಕರೆ ನೀಡಿರುವ ಚಾಮರಾಜನಗರ ಬಂದ್ ಗೆ ಕನ್ನಡ ಚಳವಳಿಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಬೆಂಬಲ ಸೂಚಿಸಿದ್ದು, ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಜಲ್ಲಾಡಳಿತ ವಿಫಲವಾಗಿದೆ ಎಂದು ದೂರಿದ್ದಾರೆ.