ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸರು ಮತ್ತು ಸಿಐಡಿ ಅರಣ್ಯ ಘಟಕದ ಇನ್ಸ್ ಪೆಕ್ಟರ್ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಅಂತರಾಜ್ಯ ದಂತಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಂತ ಮಾರಾಟದ ಖಚಿತ ಮಾಹಿತಿಯನ್ನು ಆಧರಿಸಿ ಭಾನುವಾರ ಸಂಜೆ ಕಾರ್ಯಾಚರಣೆ ನಡೆಸಿದ ಪಟ್ಟಣ ಠಾಣೆ ಪೊಲೀಸರು ಮತ್ತು ರಾಜ್ಯ ಅರಣ್ಯ ಘಟಕದ ಇನ್ಸ್ ಪೆಕ್ಟರ್ ನೇತೃತ್ವದ ಸಿಬ್ಬಂದಿಗಳ ತಂಡ ಪಟ್ಟಣದ ಹೊರವಲಯದ ಕೆ.ಎಚ್.ಬಿ.ಬಡಾವಣೆಯ ಮುಂಭಾಗದಲ್ಲಿ ಕಾರನ್ನು ವಶಕ್ಕೆ ಪಡೆದು ಅದರಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಲಕ್ಷಾಂತರ ರೂಪಾಯಿಗಳ ಮೌಲ್ಯ ಎರಡು ಆನೆ ದಂತವನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಆರೋಪಿಗಳಾದ ತಮಿಳುನಾಡಿನ ಗೂಡಲೂರು ಕುಂಜುಮಾನ್(50), ಸೋಮನ್ (51) ಮತ್ತು ಕೇರಳದ ತ್ರಿಶೂರ್ನ ಸ್ಪೀಫಾನ್ (45) ಎಂಬ ಮೂವರು ದಂತಚೋರರನ್ನು ಬಂಧಿಸಿದ್ದಾರೆ. ಆರೋಪಿಗಳು ಈ ದಂತಗಳನ್ನು ಕೇರಳದಿಂದ ಬೆಂಗಳೂರಿನ ವ್ಯಾಪಾರಿಯೋರ್ವರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಮೂವರು ಆರೋಪಿಗಳಿಂದ ಎರಡು ದಂತಗಳು, ಒಂದು ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಲಂ9,39,40,44,49ಬಿ,ಸಿ.50,51, ಡಬ್ಲೂಎಲ್ಪಿ ಆಕ್ಟ್ ರೆ/ವಿ 379 ಐಪಿಸಿ ರೀತ್ಯ ದೂರು ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ರಾಜ್ಯ ಅರಣ್ಯ ರಕ್ಷಣಾ ಪಡೆಯ ಇನ್ ಪೆಕ್ಟರ್ ಪ್ರಮೋದ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣಪ್ಪ, ಸಬ್ಇನ್ಸ್ ಪೆಕ್ಟರ್ ಬಿ.ಎನ್.ಸಂದೀಪ್ ಕುಮಾರ್, ರಾಮಯ್ಯ, ಹರೀಶ್, ಸಿಬ್ಬಂದಿಗಳಾದ ಎಚ್.ಪಿ.ಶಿವನಂಜಪ್ಪ, ಭಂಟಪ್ಪ ಮತ್ತಿತರು ಭಾಗವಹಿಸಿದ್ದರು.