ಗುಂಡ್ಲುಪೇಟೆ: ತಾಲೂಕಿನ ಕಗ್ಗಳದಹುಂಡಿ ಸಮೀಪ ನಿರ್ಮಾಣವಾಗುತ್ತಿರುವ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕಕ್ಕೆ ನಿಗದಿತ ತೂಕಕ್ಕಿಂತ ಹೆಚ್ಚಿನ ಭಾರವನ್ನು ಹೊತ್ತು ಸರಕು ಸಾಗಾಣೆ ಮಾಡುತ್ತಿದ್ದ 2 ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಗ್ಗಳದ ಹುಂಡಿ ಸಮೀಪದಲ್ಲಿ ಚೀನಾ ಮೂಲದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಸ್ಥಾಪನೆ ಕಾಮಗಾರಿಗೆ ಈ ರಸ್ತೆಯಲ್ಲಿ ಸಂಚರಿಸುವ ಸರಕು ಸಾಗಾಣೆ ಮಾಡುವ ವಾಹನಗಳು 10 ಟನ್ ಮೀರದಂತೆ ಪಂಚಾಯತ್ ರಾಜ್ ಉಪ ವಿಭಾಗವು ಅನುಮತಿ ನೀಡಿದೆ. ಕಾರ್ಖಾನೆಯ ಆಡಳಿತಮಂಡಳಿ ನಿಗದಿತ ತೂಕಕ್ಕಿಂತ ಹೆಚ್ಚಿನ ಸರಕನ್ನು ಲಾರಿಯಲ್ಲಿ ಸಾಗಣೆ ಮಾಡಲಾಗುತ್ತಿದ್ದು, ಇದರಿಂದ ಆಕ್ರೋಶಗೊಂಡ ರೈತರು ಲಾರಿಯನ್ನು ತಡೆದಿದ್ದಾರೆ.
ಹೆಚ್ಚಿನ ತೂಕದ ವಾಹನಗಳ ಸಂಚಾರದಿಂದ ಗ್ರಾಮದ ರಸ್ತೆಯು ಹಾಳಾಗುವ ಜೊತೆಗೆ ಹೊರಬರುವ ಧೂಳಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ರಸ್ತೆಯಲ್ಲಿ 10 ಟನ್ ಸಾಮಥ್ರ್ಯದ ವಾಹನಗಳು ಮಾತ್ರ ಸಂಚಾರ ಮಾಡಲು ಯೋಗ್ಯವಿದ್ದು ಇದನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ತಾವು ತಡೆ ಹಿಡಿದ ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣಪ್ಪ ಅವರು ಲಾರಿಗಳನ್ನು ಪಟ್ಟಣದ ವೇಬ್ರಿಡ್ಜ್ ನಲ್ಲಿ ತೂಕ ಮಾಡಿಸಿದಾಗ 2 ಲಾರಿಗಳಲ್ಲಿ 20 ಟನ್ ಗೂ ಹೆಚ್ಚಿನ ತೂಕದ ಸಾಮಗ್ರಿಗಳಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ತೆರಕಣಾಂಬಿ ಠಾಣೆಗೆ ಕೊಂಡೊಯ್ದಿದ್ದಾರೆ.
ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.