ಮಡಿಕೇರಿ: ನೋಟುಗಳನ್ನು ರದ್ದುಪಡಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ ಸಿಪಿಐಎಂ ಪಕ್ಷ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಇ.ರಾ.ದುರ್ಗಾಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನೋಟುಗಳು ರದ್ದುಗೊಂಡ ನಂತರ ಕಾರ್ಮಿಕ ವರ್ಗ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಬ್ಯಾಂಕ್ ಗಳ ಮುಂದೆ ಸಾಲು ಗಟ್ಟಿ ನಿಲ್ಲುವುದಕ್ಕಾಗಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಕಪ್ಪು ಹಣ ಮತ್ತು ಭಯೋತ್ಪಾದೆ ನಿಯಂತ್ರಣ್ಕಕ್ಕಾಗಿ ನೋಟುಗಳನ್ನು ರದ್ದುಗೊಳಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಇಂದಿಗೂ ಕಪ್ಪು ಹಣದ ಜಾಲ ವ್ಯಾಪಕವಾಗಿದೆ ಮತ್ತು ಭಯೋತ್ಪಾದನೆ ಹೆಚ್ಚುತ್ತಲೆ ಇದೆಯೆಂದು ಪ್ರಮುಖರು ಅಭಿಪ್ರಾಯಪಟ್ಟರು. ಡಾ.ಇ.ರಾ.ದುರ್ಗಾಪ್ರಸಾದ್ ಮಾತನಾಡಿ ಕೇಂದ್ರ ಸರಕಾರದ ಆರ್ಥಿಕ ನೀತಿಯನ್ನು ಖಂಡಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಬ್ಯಾಂಕ್ ಖಾತೆದಾರರು ತಮ್ಮ ಸ್ವಂತ ಹಣವನ್ನು ವಾಪಾಸ್ ಪಡೆಯಲು ಹೇರಲಾಗಿರುವ ನಿರ್ಬಂಧವನ್ನು ಹಿಂಪಡೆಯಬೇಕು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿರುವುದರಿಂದ ರೈತರ ಸಾಲವನ್ನು ತುರ್ತಾಗಿ ಮನ್ನಾ ಮಾಡಬೇಕು, ಗ್ರಾಮೀಣ ಕೆಲಸಗಾರರಿಗೆ ಹೆಚ್ಚುವರಿ ಕೆಲಸ ನೀಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಎರಡು ಪಟ್ಟು ಅನುದಾನ ನೀಡಬೇಕು, ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಂತು ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಹಾಗೂ ವರ್ತಕರಿಗೆ ಆರ್ಥಿಕ ಹಿನ್ನಡೆಯಾಗಿರುವುದರಿಂದ ತೆರಿಗೆ ವಿನಾಯಿತಿ ನೀಡಬೇಕು, ದೇಶದ ಸಹಕಾರಿ ಬ್ಯಾಂಕ್ ಗಳು ನಾಶವಾಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು, ಡಿಜಿಟಲ್ ವ್ಯವಹಾರದ ಬಗ್ಗೆ ಯಾರ ಮೇಲೂ ಒತ್ತಡ ಹೇರಬಾರದು, ಎಲ್ಲಾ ಪಡಿತರ ಚೀಟಿದಾರರಿಗೆ ಸಮರ್ಪಕ ರೀತಿಯಲ್ಲಿ ಪಡಿತರ ನೀಡಬೇಕು ಮತ್ತು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಕ್ರಮವನ್ನು ಹಿಂಪಡೆಯಬೇಕು, ಎಲ್ಲಾ ಬಡವರಿಗೆ ನಿವೇಶನ ಮತ್ತು ವಸತಿ ಹಂಚಬೇಕು, ಬರ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕು ಎಂದು ಪಕ್ಷದ ಜಿಲ್ಲಾ ಪ್ರಮುಖ ಹೆಚ್.ಬಿ.ರಮೇಶ್ ಒತ್ತಾಯಿಸಿದರು.
ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರಮುಖರಾದ ಎ.ಸಿ.ಸಾಬು, ಪಿ.ಆರ್.ಭರತ್, ಕುಟ್ಟಪ್ಪ, ಮಹದೇವ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.