ಚಾಮರಾಜನಗರ: ಬರದ ಹಿನ್ನಲೆಯಲ್ಲಿ ರೈತರ ಜಾನುವಾರುಗಳು ಮೇವು, ನೀರಿಲ್ಲದೆ ತೊಂದರೆಪಡಬಾರದೆಂಬ ಉದ್ದೇಶದಿಂದ ಸರ್ಕಾರ ಗೋಶಾಲೆಗಳನ್ನು ತೆರೆದಿದ್ದು, ಈ ಗೋವುಶಾಲೆಯಲ್ಲೇ ಜಾನುವಾರುಗಳು ಸಾವನ್ನಪ್ಪುತ್ತಿರುವುದು ಬೇಲಿಯೇ ಎದ್ದು ಹೊಲಮೇಯ್ದಂತಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಗೋಶಾಲೆಯಲ್ಲಿ ಜಾನುವಾರು ಸಾವನ್ನಪ್ಪಿದ್ದು ಮುಗ್ಗಲು ಮೇವು ತಿಂದ ಪರಿಣಾಮವಾಗಿ ಜಾನುವಾರು ಸಾವಿಗೀಡಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಸರ್ಕಾರ ಕಾಟಚಾರಕ್ಕೆ ಗೋಶಾಲೆಗಳನ್ನು ತೆರೆದಿದೆ ಇಲ್ಲಿ ಸಮರ್ಪಕವಾಗಿ ಯಾವುದೇ ರೀತಿಯ ಮೇವನ್ನು ಹಾಕುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ. ತಮ್ಮ ಮನೆಯಲ್ಲಿ ಹಸುವನ್ನು ಸಾಕುವುದು ಕಷ್ಟ ಎಂದು ಬೊಮ್ಮನಹಳ್ಳಿಯ ರೈತ ಶಿವನಂಜಪ್ಪ ಅವರು ಗಬ್ಬದ ಹಸುವನ್ನು ಗೋಶಾಲೆಯಲ್ಲಿ ಬಿಟ್ಟಿದ್ದರು. ಆದರೆ ಅದು ನೀರು ಮಿಶ್ರಿತ ಮುಗ್ಗಲು ಮುಸುಕಿನ ಜೋಳದ ಕಡ್ಡಿಯನ್ನು ತಿಂದು ಇತ್ತೀಚೆಗೆ ಸಾವನ್ನಪ್ಪಿದೆ.
ಪ್ರತಿ ಶನಿವಾರವೂ ಗೋಶಾಲೆಗೆ ರಜೆ ಘೋಷಿಸಿದ್ದರೂ ಸರಿಯಾಗಿ ಶುಚಿಗೊಳಿಸಿ ಕೀಟನಾಶಕಗಳನ್ನು ಸಿಂಪಡಿಸುತ್ತಿಲ್ಲ. ಇದರಿಂದಾಗಿ ರಾಸುಗಳು ಪದೇ ಪದೇ ಅನಾರೋಗ್ಯಕ್ಕೊಳಗಾಗುತ್ತಿವೆ. ಹೆಚ್ಚಿನ ತೂಕ ಬರಲೆಂದು ಒಣ ಮೇವಿಗೆ ನೀರು ಸಿಂಪಡಿಸಿ ನೀಡುತ್ತಿರುವ ಪರಿಣಾಮವಾಗಿ ಮುಗ್ಗಲು ಆಹಾರ ಸೇವನೆಯಿಂದ ರಾಸುಗಳು ಬಡಕಲಾಗುತ್ತಿವೆ. ಪೌಷ್ಠಿಕ ಆಹಾರ ಹಾಗೂ ಹಸಿ ಮೇವಿನ ಕೊರತೆಯಿಂದ ದಿನೇ ದಿನೇ ರಾಸುಗಳು ನಿಶ್ಯಕ್ತವಾಗುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಜಾನುವಾರಿಗೂ ವಿಮೆಯಿಲ್ಲದ ಕಾರಣದಿಂದ ಸಾವಿಗೀಡಾದರೆ ಮಾಲೀಕರಿಗೆ ಯಾವುದೇ ರೀತಿಯ ಪರಿಹಾರ ದೊರಕುವುದಿಲ್ಲ. ಉಚಿತ ಮೇವು ದೊರಕುತ್ತದೆ ಎಂಬ ಕಾರಣದಿಂದ ಇಲ್ಲಿಗೆ ಬಂದ ಜಾನುವಾರುಗಳು ಇನ್ನೂ ಬಡಕಲಾಗಿ ಸಾಯುವ ಹಂತಕ್ಕೆ ಬಂದಿರುವುದು ಮಾಲೀಕರ ಆತಂಕಕ್ಕೆ ಕಾರಣವಾಗಿದೆ.
ಆದ್ದರಿಂದ ಗೋಶಾಲೆಗೆ ಬರುವ ರಾಸುಗಳಿಗೆ ಸರ್ಕಾರವೇ ವಿಮೆ ಮಾಡಿಕೊಡಬೇಕು ಹಾಗೂ ಸಾವಿಗೀಡಾದಲ್ಲಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.