ಗುಂಡ್ಲುಪೇಟೆ: ಕಳೆದ ಕೆಲವು ಸಮಯಗಳಿಂದ ತೆರಕಣಾಂಬಿ ಹೋಬಳಿಯ ಕೆರೆಗಳಲ್ಲಿ ನೀರು ಬತ್ತುತ್ತಿದ್ದು ಮೈದಾನದಂತಾಗಿತ್ತು. ಇದೀಗ ನದಿಯಿಂದ ನೀರು ಹರಿಸುತ್ತಿರುವ ಪರಿಣಾಮ ಸುತ್ತಮುತ್ತಲ ಜನರಲ್ಲಿ ಸಂಭ್ರಮ ಮನೆ ಮಾಡಿದೆ.
ಕಳೆದ ಆರು ತಿಂಗಳ ಹಿಂದೆಯಿಂದಲೂ ತೆರಕಣಾಂಬಿ, ಬಲಚವಾಡಿ, ಶ್ಯಾನಾಡ್ರಹಳ್ಳಿ ಗ್ರಾಮಗಳ ಕೆರೆಗಳಿಗೆ ನದಿಯಿಂದ ನೀರು ತುಂಬಿಸಿ ಎಂದು ಗ್ರಾಮಸ್ಥರು, ರೈತರು ಒತ್ತಾಯಿಸುತ್ತಾ ಬಂದಿದ್ದರು. ಆದರೆ ಯಾರೂ ಇತ್ತ ಗಮನಹರಿಸಿರಲಿಲ್ಲ. ಜತೆಗೆ ಈ ವ್ಯಾಪ್ತಿಯ ಜನ ಜಾನುವಾರುಗಳು ಈ ಕೆರೆಗಳನ್ನೇ ಅವಲಂಬಿಸಿದ ಕಾರಣ ಕೆರೆಯಲ್ಲಿದ್ದ ನೀರೆಲ್ಲ ಖಾಲಿಯಾಗಿ ಮೈದಾನದಂತಾಗಿತ್ತು.
ಕೆರೆಗಳು ಒಣಗಿದ ಪರಿಣಾಮ ಸುತ್ತಮುತ್ತಲಿನ ಅಂತರ್ಜಲ ಕಡಿಮೆಯಾಗಿದ್ದು ಬೋರ್ವೆಲ್ ಗಳಲ್ಲಿ ನೀರಿನ ಮಟ್ಟ ಪಾತಾಳ ತಲುಪಿತ್ತು. ಜಾನುವಾರುಗಳು ನೀರಿಲ್ಲದೆ ಪರದಾಡುವಂತಾಗಿತ್ತು.
ನೀರು ಹರಿಸುವಂತೆ ಸಂಸದ ಆರ್.ಧ್ರುವನಾರಾಯಣ ಸೇರಿದಂತೆ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಇದೀಗ ತೆರಕಣಾಂಬಿ ಗ್ರಾಮದ ಕೆರೆಗೆ ಸೋಮವಾರದಂದು ನದಿ ಮೂಲದಿಂದ ನೀರು ಹರಿಸಲಾಗುತ್ತಿದೆ.
ಕೆರೆಗೆ ನೀರು ಹರಿಸುವ ಪೈಪ್ ಲೈನ್ ಬಳಿ ಹರಿಯುವ ನೀರಿನಲ್ಲಿ ಬೇಸಿಗೆಯ ಬಿಸಿಲಿನಲ್ಲಿ ಬಸವಳಿದ ಮಕ್ಕಳು ನೀರಿನಲ್ಲಿ ಈಜಾಡಿ ಖುಷಿಪಡುತ್ತಿದ್ದರೆ, ಕೆರೆಗೆ ನೀರು ಬಂದ ಖುಷಿಯಲ್ಲಿ ಗ್ರಾಮದ ಜನ ಸಂತಸ ಪಡುತ್ತಿದ್ದಾರೆ.