ಮಡಿಕೇರಿ: ಕೊಡಗು ಮೂಲದ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆಯಬೇಕಿದ್ದ ವಿಚಾರಣೆ ಮಾ.6 ಕ್ಕೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.
ಮಡಿಕೇರಿಯ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ. ದೀರ್ಘ ಕಾಲದ ರಜೆಯಲ್ಲಿದ್ದ ನ್ಯಾಯಮೂರ್ತಿ ಅನ್ನಪೂರ್ಣೇಶ್ವರಿ ಅವರು ಕರ್ತವ್ಯಕ್ಕೆ ಮರಳಿದ್ದು, ಅವರ ನ್ಯಾಯಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶರ ರಜೆಯ ಹಿನ್ನೆಲೆಯಲ್ಲಿ ಪ್ರಕರಣ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ಬಾಬು ಅವರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಆದರೆ ಕಾರಣಾಂತರಗಳಿಂದ ನ್ಯಾಯಮೂರ್ತಿಗಳು ಒಂದೆರಡು ಬಾರಿ ಮುಂದೂಡಿದರಲ್ಲದೆ, ಫೆ.21 ರಂದು ವಿಚಾರಣೆ ನಿಗದಿಯಾಗಿತ್ತು. ಇದೀಗ ಮತ್ತೆ ಮಾರ್ಚ್ 6ಕ್ಕೆ ವಿಚಾರಣೆ ಮುಂದೂಡಲ್ಪಟ್ಟಿದೆ.
ಘಟನೆಯ ವಿವರ: ಮಡಿಕೇರಿಯ ಲಾಡ್ಜ್ವೊಂದರಲ್ಲಿ ಜು.7 ರಂದು ರಾತ್ರಿ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತಲ್ಲದೇ, ವಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಪ್ರಕರಣವನ್ನು ಸಿ.ಐ.ಡಿ. ತನಿಖೆಗೆ ಒಪ್ಪಿಸಿತ್ತು.
ತನಿಖೆ ನಡೆಸಿದ ಸಿ.ಐ.ಡಿ.ತಂಡ ಸೆ.17 ರಂದು ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಿತ್ತಲ್ಲದೇ, ಆರೋಪಕ್ಕೆ ಗುರಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಪ್ರಸಾದ್ ಅವರುಗಳಿಗೆ ಕ್ಲೀನ್ ಚಿಟ್ ನೀಡಿತ್ತು.
ಸಿ.ಐ.ಡಿ. ವರದಿಯ ಮೇಲಿನ ವಿಚಾರಣೆಯೂ ಸೆ.29 ರಂದು ನ್ಯಾಯಾಲಯದ ಮುಂದೆ ಬಂದಾಗ ಗಣಪತಿ ಅವರ ಪುತ್ರ ನೇಹಾಲ್ ಸಿ.ಐ.ಡಿ. ಸಲ್ಲಿಸಿದ್ದ ಬಿ ರಿಪೋರ್ಟ್ ಗೆ ಆಕ್ಷೇಪಣೆ ಸಲ್ಲಿಸದಿರಲು ನಿರ್ಧರಿಸಿದಾಗ ಪ್ರಕರಣದಲ್ಲಿ ತಮ್ಮನ್ನು ಪಿರ್ಯಾದಿದಾರರೆಂದು ಪರಿಗಣಿಸುವಂತೆ ಕೋರಿ ಗಣಪತಿ ಅವರ ತಂದೆ ಎಂ.ಕೆ.ಕುಶಾಲಪ್ಪ, ತಾಯಿ ಪೊನ್ನಮ್ಮ, ಸಹೋದರ ಎಂ.ಕೆ.ನಾಚಯ್ಯ, ಸಹೋದರಿ ಎಂ.ಕೆ. ಸಬೀತಾ ಅವರು ವಕೀಲ ಸುಮಂತ್ ಪಾಲಾಕ್ಷ ಅವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದ್ದರು. ಅಕ್ಟೋಬರ್ 24 ರಂದು ಪ್ರಕರಣ ವಿಚಾರಣೆ ನಡೆಯಬೇಕಿತ್ತಾದರೂ, ನ್ಯಾಯಾಧೀಶರು ದೀರ್ಘಕಾಲದ ರಜೆಯ ಮೇಲೆ ತೆರಳಿದ್ದರಿಂದ ಪ್ರಿನಿಪಲ್ ಸಿವಿಲ್ ಜಡ್ಜ್ ನ್ಯಾಯಾಧೀಶರು ವಿಚಾರಣೆಯನ್ನು ಡಿಸೆಂಬರ್ 31ಕ್ಕೆ ನಿಗದಿ ಪಡಿಸಿದ್ದರು. ತದನಂತರ ಜ.28 ರಂದು ನಡೆಯಬೇಕಾಗಿದ್ದ ವಿಚಾರಣೆ ಕೂಡ ಫೆ.21ಕ್ಕೆ ಮುಂದೂಡಲ್ಪಟ್ಟಿತ್ತು.