ಮಡಿಕೇರಿ: ಒಂದು ಕಾಲದಲ್ಲಿ ಕೋವಿಯೊಂದಿಗೆ ಕಾಡಿಗೆ ನುಗ್ಗಿ ಬೇಟೆಯಾಡುತ್ತಿದ್ದ ಪ್ರಕರಣಗಳು ಕೊಡಗಿನಲ್ಲಿ ಪತ್ತೆಯಾಗುತ್ತಿದ್ದವು. ಆದರೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಕೋವಿಯಿಂದ ಗುಂಡು ಹಾರಿಸಿ ಪ್ರಾಣಿಗಳನ್ನು ಬೇಟೆಯಾಡುವ ಕೃತ್ಯಕ್ಕೆ ಕಡಿವಾಣ ಬಿದ್ದಿದೆ.
ಆದರೆ ಕೆಲವರು ಅರಣ್ಯದಂಚಿನಲ್ಲಿ ಕಾಡು ಪ್ರಾಣಿಗಳು ಓಡಾಡುವ ಸ್ಥಳದಲ್ಲಿ ಉರುಳು ಇಟ್ಟು ಪ್ರಾಣಿಗಳನ್ನು ಹಿಡಿಯುವ ಕೃತ್ಯ ಎಸಗುತ್ತಿದ್ದು, ಇತ್ತೀಚೆಗೆ ಇಂತಹ ಉರುಳಿಗೆ ಸಿಕ್ಕಿ ಹುಲಿಯೊಂದು ಸಾವನ್ನಪ್ಪಿತ್ತು. ಕೆಲವರು ಉರುಳಿಡುವುದನ್ನೇ ದಂಧೆ ಮಾಡಿಕೊಂಡು ಕಾಡು ಹಂದಿ, ಮೊಲ, ಕಾಡುಕುರಿ ಮೊದಲಾದವುಗಳನ್ನು ಬೇಟೆಯಾಡುತ್ತಿದ್ದರು. ಈ ವರ್ಷ ಮಳೆಯ ಕೊರತೆಯಿಂದಾಗಿ ಪ್ರಾಣಿಗಳು ನೀರು ಮತ್ತು ಮೇವಿಗಾಗಿ ಅರಣ್ಯದಿಂದ ಹೊರ ಬರುತ್ತಿದ್ದು, ನದಿ, ಕೆರೆಗಳಿಗೆ ತೆರಳಿ ನೀರು ಕುಡಿದು ಅರಣ್ಯಕ್ಕೆ ಹಿಂತಿರುಗುತ್ತಿವೆ. ಹೀಗೆ ಕಾಡುಪ್ರಾಣಿಗಳು ಅರಣ್ಯದಿಂದ ಬರುವ ದಾರಿಯನ್ನು ಹುಡುಕಿ ಅಲ್ಲಿ ಉರುಳಿಡುವ ಮೂಲಕ ದುಷ್ಕಮರ್ಿಗಳು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಕೆಲವು ಸಮಯದ ಹಿಂದೆ ಹುಲಿಯೊಂದು ಉರುಳಿಗೆ ಸಿಲುಕಿತ್ತು. ಅದಕ್ಕೆ ಅರವಳಿಕೆ ನೀಡಿ ಉರುಳಿನಿಂದ ಬಿಡಿಸಲಾಯಿತಾದರೂ ಬಳಿಕ ಅದು ಸಾವನ್ನಪ್ಪಿತ್ತು. ಮತ್ತೊಂದು ಹುಲಿಯ ಮೃತದೇಹ ಸಿಕ್ಕಿತ್ತಾದರೂ ಅದು ಉರುಳಿಗೆ ಸಿಕ್ಕಿ ಸತ್ತಿರುವ ಸಂಶಯ ವ್ಯಕ್ತವಾಗಿತ್ತು.
ಇದೆಲ್ಲವನ್ನು ಗಮನಿಸಿದ ಅರಣ್ಯ ಇಲಾಖೆ ಉರುಳಿಟ್ಟು ಬೇಟೆಯಾಡುವ ಬೇಟೆಗಾರರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿತ್ತು. ಕಳೆದ ಒಂದು ತಿಂಗಳಿನಿಂದ ದುಷ್ಕರ್ಮಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಈ ನಡುವೆ ಬೇಟೆಗಾರರ ಪಾಪದ ಕೊಡ ತುಂಬಿತ್ತು. ಹೀಗಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಳ್ಳ ವಲಯದಲ್ಲಿ ಉರುಳಿಡುತ್ತಿದ್ದ ಸಂದರ್ಭ ಪಾಲ್ದಳ ಹಾಡಿಯ ಕುಟ್ಟ, ಬಸವ, ಮುತ್ತ, ಕಾಪಲ, ಚುಬ್ಬ ಎಂಬ ಐವರು ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅರಣ್ಯದ ಹಲವಾರು ಕಡೆಯಿಟ್ಟಿದ್ದ ಸುಮಾರು 600 ಉರುಳುಗಳು ಸಿಕ್ಕಿವೆ. ಪ್ರಕರಣವನ್ನು ಪೊನ್ನಂಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಇದುವರೆಗೆ ಈ ದುಷ್ಕರ್ಮಿಗಳು ಅದೆಷ್ಟು ಪ್ರಾಣಿಗಳನ್ನು ಉರುಳಿಟ್ಟು ಸಾಯಿಸಿದ್ದಾರೋ? ಸದ್ಯ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದು, ಇನ್ನಾದರೂ ಪ್ರಾಣಿಗಳು ನೆಮ್ಮದಿಯಾಗಿ ಓಡಾಡಬಹುದೇನೋ.