ಮಡಿಕೇರಿ: ತಾಲ್ಲೂಕು ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರವನ್ನು ನೀಡುತ್ತಿಲ್ಲವೆಂದು ಆರೋಪಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಅವರ ವಿರುದ್ಧ ತಾ.ಪಂ ಸಾಮಾನ್ಯ ಸಭೆ ಖಂಡನಾ ನಿರ್ಣಯ ತೆಗೆದುಕೊಂಡಿದೆ.
ತಾ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ತನೆಯನ್ನು ಖಂಡಿಸಿದರು. ಸಿಬ್ಬಂದಿಗಳ ಕೊರತೆಯಿಂದ ಅಗತ್ಯ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಕಛೇರಿ ವ್ಯವಸ್ಥಾಪಕರನ್ನು ವಾರದ ಮೂರು ದಿನಗಳ ಕಾಲ ಪೊನ್ನಂಪೇಟೆಯ ತಾಲ್ಲೂಕು ಪಂಚಾಯ್ತಿ ಕಛೇರಿಯ ಕಾರ್ಯನಿರ್ವಹಣೆಗೆ ನಿಯುಕ್ತಿಗೊಳಿಸಲಾಗಿದೆ. ಪ್ರಸ್ತುತ ಪಂಚಾಯ್ತಿಯ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಜಿ.ಪಂ ಸಿಇಒ ಅವರು ಶೀಘ್ರ ಅನುಮೋದನೆ ನೀಡದೆ, ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಮಾತನಾಡಿ ಜಿ.ಪಂ ಸಿಇಒ ಅವರು ಮಡಿಕೇರಿ ತಾ.ಪಂ ವಿರುದ್ಧ ದ್ವೇಷ ಸಾಧಿಸುತ್ತಿರುವುದಾಗಿ ಟೀಕಿಸಿದರು. ತಾ.ಪಂ ಕಛೇರಿಗೆ ನಿಯುಕ್ತಿಗೊಳ್ಳುವ ಸಿಬ್ಬಂದಿಗಳನ್ನು ಶೀಘ್ರದಲ್ಲೆ ಬೇರೆಡೆಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಮಡಿಕೇರಿ ತಾಲ್ಲೂಕು ಪಂಚಾಯ್ತಿ ‘ಟ್ರೈನಿಂಗ್ ಸೆಂಟರ್’ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಕೊಡಪಾಲು ಗಣಪತಿ ಮಾತನಾಡಿ ಸಿಇಒ ವಿರುದ್ಧ ಖಂಡನಾ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಒತ್ತಾಯಿಸಿದರು. ಈ ಹಂತದಲ್ಲಿ ಸದಸ್ಯ ಡಿ.ಇ.ಶ್ರೀಧರ್, ನಿರ್ಣಯ ಕೈಗೊಳ್ಳುವುದರ ಜೊತೆಯಲ್ಲೆ ಅಧ್ಯಕ್ಷರು, ಉಪಾಧ್ಯಕ್ಷರಾದಿಯಾಗಿ ಸರ್ವಸದಸ್ಯರು ಒಮ್ಮೆ ಸಿಇಒ ಅವರನ್ನು ಭೇಟಿಯಾಗಿ ಮಾತನಾಡುವುದು ಒಳಿತೆಂದು ಸಲಹೆ ನೀಡಿದರು.
ಉಪಾಧ್ಯಕ್ಷ ಬೊಳಿಯಾಡಿರ ಸುಬ್ರಮಣಿ ಮಾತನಾಡಿ ಈ ಹಿಂದೆ ನಾವು ಸಿಇಒ ಅವರನ್ನು ಭೇಟಿಯಾದಾಗ ಅವರು ನಮ್ಮೊಂದಿಗೆ ಸೌಜನ್ಯಯುತವಾಗಿ ವರ್ತಿಸಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ತರಬೇತಿ ಬೇಡ:
ಸದಸ್ಯೆ ಇಂದಿರಾ ಹರೀಶ್ ಅವರು, ಎಮ್ಮೆಮಾಡು ಶಾಲೆಯಲ್ಲಿ ಇರುವ ಶಿಕ್ಷಕರನ್ನು ಪರೀಕ್ಷೆಯ ಅವಧಿ ಸಮೀಪಿಸುತ್ತಿರುವ ಹಂತದಲ್ಲಿ ತರಬೇತಿಗೆ ಕಳುಹಿಸಲಾಗಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಎದುರಾಗಿರುವುದನ್ನು ಪ್ರಸ್ತಾಪಿಸಿದರು. ಈ ಸಂದರ್ಭ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಇಂತಹ ತರಬೇತಿಗಳನ್ನು ತಕ್ಷಣವೆ ನಿಲ್ಲಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರನ್ನು ಆಗ್ರಹಿಸಿದ್ದಲ್ಲದೆ, ಕಳೆದ ಸಭೆಯಲ್ಲಿ ತಾನು ಕೆಲ ಶಾಲಾ ಕಟ್ಟಡಗಳು ಶಿಥಿಲವಾಗಿರುವ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ, ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.