ಚಾಮರಾಜನಗರ: ಇಲ್ಲಿನ ಶ್ರೀ ಚಾಮರಾಜೇಶ್ವರ ಬ್ರಹ್ಮ ರಥಕ್ಕೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಠಾಣೆ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಪಟ್ಟಣದ ಉಪ್ಪಾರ ಬಡಾವಣೆಯ ನಿವಾಸಿ ಮೋಹನ್ಕುಮಾರ್ (35) ಬಂಧಿತನಾಗಿದ್ದು, ಈತ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಈತನೊಂದಿಗೆ ಇನ್ನು ಕೆಲವರು ಭಾಗಿಯಾಗಿರುವ ಶಂಕೆಯಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೆ. 19ರ ಭಾನುವಾರ ಬೆಳಗ್ಗಿನ ಜಾವ ಸುಮಾರು ಒಂದೂವರೆ ಘಂಟೆ ಸಮಯದಲ್ಲಿ ದೇವಾಲಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಶ್ರೀ ಚಾಮರಾಜೇಶ್ವರ ಬ್ರಹ್ಮರಥಕ್ಕೆ ಬೆಂಕಿ ಹಾಕಲಾಗಿತ್ತು. ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಬೆಂಕಿ ಹತ್ತಿ ಉರಿದಿದ್ದರಿಂದ ರಥಕ್ಕೆ ಹಾನಿಯಾಗಿತ್ತು.
ಈ ವಿಷಯ ಹೊರ ಬರುತ್ತಿದ್ದಂತೆಯೇ ಚಾಮರಾಜನಗರದಲ್ಲಿ ಉದ್ವಿಗ್ನ ಪರಿಸ್ಥಿತಿಯುಂಟಾಗಿತ್ತು. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಬಂದ್ಗೆ ಕರೆ ನೀಡಿದ್ದವು. ಈ ನಡುವೆ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ಕುಮಾರ್ ಆರ್.ಜೈನ್ ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚನೆಯಾಗಿ, ತನಿಖೆ ಚುರುಕುಗೊಂಡಿತ್ತು. ಕೊನೆಗೂ ಪೊಲೀಸರು ಆರೋಪಿ ಮೋಹನ್ಕುಮಾರ್ ಎಂಬಾತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ರಥಕ್ಕೆ ಬೆಂಕಿ ಹಚ್ಚಲು ಕಾರಣವೇನು? ಕೃತ್ಯದ ಹಿಂದೆ ಇನ್ಯಾರಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.