ಮಡಿಕೇರಿ: ಕುಡಿಯುವ ನೀರಿಗೆ ಪರದಾಟ ಆರಂಭವಾಗಿರುವ ಈ ಸಮಯದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೊಳಪಡುವ ಗ್ರಾಮಸ್ಥರ ಪರಿಸ್ಥಿತಿಯಾಗಿದೆ.
ಇಷ್ಟಕ್ಕೂ ಅಲ್ಲಿನ ಗ್ರಾಮಸ್ಥರು ಅನುಭವಿಸುತ್ತಿರುವ ತೊಂದರೆ ಏನು ಎಂದು ಹುಡುಕುತ್ತಾ ಹೋದರೆ ಶ್ರೀಮಂತರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈಗ ಬೇಸಿಗೆಯ ಸಮಯ ಒಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೆ, ಮತ್ತೊಂದೆಡೆ ಇರುವ ನೀರು ಕೂಡ ಕಲುಷಿತಗೊಳ್ಳುತ್ತಿದೆ. ಈ ನೀರು ಹೇಗೆ ಕಲುಷಿತಗೊಳ್ಳುತ್ತಿದೆ ಎಂಬುದನ್ನು ನೋಡಿದರೆ ಕೆಲವು ಕಾಫಿ ಎಸ್ಟೇಟ್ ಮಾಲೀಕರು ಕಾಫಿ ಪಲ್ಪಿಂಗ್ ಮಾಡಿ ನೀರನ್ನು ಹೊರಕ್ಕೆ ಬಿಡುತ್ತಿರುವುದೇ ಕಾರಣವಾಗಿದೆ.
ಹೊರಗೆ ಬರುತ್ತಿರುವ ಕಾಫಿ ಪಲ್ಪಿಂಗ್ ನ ತ್ಯಾಜ್ಯ ನೀರಿನೊಂದಿಗೆ ಸೇರ್ಪಡೆಯಾಗುತ್ತಿದ್ದು ಇದರಿಂದ ತೊರೆಯ ನೀರನ್ನು ಕುಡಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರನ್ನು ಕುಡಿದ ಕೆಲವು ಜಾನುವಾರುಗಳು ರೋಗದಿಂದ ಬಳಲುತ್ತಿವೆ. ಅಷ್ಟೇ ಅಲ್ಲ ನೀರು ದುರ್ವಾಸನೆ ಬೀರುತ್ತಿದೆ. ಇದರಿಂದ ಇಡೀ ವಾತಾವರಣವೇ ಕಲುಷಿತಗೊಂಡಿದ್ದರೂ ಸಂಬಂಧಿಸಿದವರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ತೆಪ್ಪಗಾಗಿದ್ದಾರೆ.
ಎಮ್ಮೆಗುಂಡಿ ತೋಟ ಹಾಗೂ ಲೆಬ್ಬೆ ಕಾಫಿ ತೋಟದಿಂದ ಕಾಫಿ ಪಲ್ಪಿಂಗ್ ಮಾಡಿದ ಕಲುಷಿತ ನೀರನ್ನು ತೋಟದ ಒಳಗೆ ಗುಂಡಿ ತೋಡಿ ಬಿಡುತ್ತಿದ್ದರೂ ಅದು ತುಂಬಿ ಹರಿದು ತೋಡಿಗೆ ಸೇರುತ್ತಿರುವುದರಿಂದ ಹರದೂರು ಗ್ರಾಮದ ಕಲ್ಲುಮುಟ್ಲು ಪುಟ್ಟಣ್ಣ, ಹರದೂರು ಬಾಲಪ್ಪ ಅವರ ಮನೆಯ ಮೂರು ಕುಟುಂಬದವರು ಹಾಗೂ ಮೇದೂರ ಸುರೇಶ್, ಹರದೂರು ಗ್ರಾಮದ ಜಯರಾಮ, ವರಪ್ರಸಾದ, ದೀಪಕ್ ಅವರು ಪರದಾಡುವಂತಾಗಿದೆ. ಜತೆಗೆ ಅವರ ಮನೆಯ ಸಮೀಪದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ.
ಇದೇ ನೀರನ್ನು ಜಾನುವಾರುಗಳು, ಪ್ರಾಣಿಪಕ್ಷಿಗಳು ಕುಡಿಯಬೇಕಾಗಿರುವುದರಿಂದ ಅವು ಸಾವನ್ನಪ್ಪುವ ಭಯ ಎದುರಾಗಿದೆ. ತೋಡಿನಲ್ಲಿ ಕಾಫಿ ಪಲ್ಪಿಂಗ್ ನ ಕಲುಷಿತ ನೀರು ಹರಿಯುವುದರಿಂದಾಗಿ ಇದನ್ನೇ ಕುಡಿಯಲು ಬಳಸುತ್ತಿದ್ದ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನು ಮುಂದೆಯಾದರೂ ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಗ್ರಾಮಸ್ಥರು ಕಾದು ನೋಡುತ್ತಿದ್ದಾರೆ.