ಚಾಮರಾಜನಗರ: ಸಾಮಾನ್ಯವಾಗಿ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾದರೆ ಪಟಾಕಿ ಸಿಡಿಸುವುದು, ನಾಯಕನ ಕಟೌಟ್ ಗೆ ಕ್ಷೀರಾಭಿಷೇಕ ಮಾಡುವುದು ಸಾಮಾನ್ಯ ಆದರೆ ಚಾಮರಾಜನಗರದಲ್ಲಿ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಪಟ್ಟಣದ ಸಿಂಹಮೂವಿಲ್ಯಾಂಡ್ ನಲ್ಲಿ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಬಿಡುಗಡೆಯಾದ ಹಿನ್ನಲೆಯಲ್ಲ್ಲಿ ತಮ್ಮಡಹಳ್ಳಿ ಮಹರ್ಷಿ ವಾಲ್ಮೀಕಿ ಸಂಘ ಹಾಗೂ ಸುದೀಪ್ ಅಭಿಮಾನಿಗಳು ಚಾಮರಾಜನಗರ ರಕ್ತನಿಧಿ ಕೇಂದ್ರಕ್ಕೆ ಚಿತ್ರಮಂದಿದಲ್ಲಿ ರಕ್ತದಾನ ಮಾಡಿದರು. ಈ ವೇಳೆ ಸ್ಥಳದಲ್ಲಿದ್ದ ರೆಡ್ಕ್ರಾಸ್ ಸಂಸ್ಥೆ ಚಾಮರಾಜನಗರ ಜಿಲ್ಲೆಯ ಕಾರ್ಯದರ್ಶಿ ಡಾ.ಮಹೇಶ್ ಮಾತನಾಡಿ ರಕ್ತದಾನ ಮಾಡುವುದರಿಂದ ಎಷ್ಟೋ ಪ್ರಾಣಗಳನ್ನು ಉಳಿಸಿದ ಪುಣ್ಯ ಬರುತ್ತದೆ. ರಕ್ತದಾನ ಮಾಡುವುದರಿಂದ ಆರೋಗ್ಯ ಶುದ್ಧಿಯಾಗುತ್ತದೆ. ಆದ್ದರಿಂದ ರಕ್ತದಾನ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಸಿಂಹಮೂವಿಲ್ಯಾಂಡ್ ನ ಮಾಲಿಕರಾದ ಎ.ಜಯಸಿಂಹ ಮಾತನಾಡಿ ಸುದೀಪ್ ಅಭಿಮಾನಿಗಳು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಅಪಘಾತದಲ್ಲಿ ರಕ್ತ ಕಳೆದು ಕೊಂಡವರಿಗೆ ಹಾಗೂ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ಇರುತ್ತದೆ. ಆಗ ಇದೀಗ ದಾನ ಮಾಡಿದ ರಕ್ತ ಉಪಯೋಗಕ್ಕೆ ಬರುತ್ತ್ತದೆ. ಆದ್ದರಿಂದ ಬೇರೆಲ್ಲದಕ್ಕಿಂತ ರಕ್ತದಾನ ಬಹಳ ಶ್ರೇಷ್ಠ ದಾನವಾಗಿದೆ ಎಂದು ಹೇಳಿದರು. ಇದೇ ವೇಳೆ ಸುಮಾರು 30 ಅಭಿಮಾನಿಗಳು ರಕ್ತದಾನ ಮಾಡಿ ಮೆಚ್ಚುಗೆಗೆ ಪಾತ್ರರಾದರು. ರಕ್ತದಾನ ಶಿಬಿರದಲ್ಲಿ ರಕ್ತನಿಧಿ ಕೇಂದ್ರದ ಡಾ. ಸುಜಾತ, ಸಿಬ್ಬಂದಿ ಸತ್ಯ, ಮುಕುಂದ್, ಅಲೆಕ್ಸ್, ರೂಪ, ಶಶಾಂಕ್, ದೇವಿ ಇದ್ದರು.