ಚಾಮರಾಜನಗರ: ಬೇಸಿಗೆ ಬರುತ್ತಿದ್ದಂತೆಯೇ ಅಲ್ಲಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದು, ಎಷ್ಟೇ ಎಚ್ಚರ ವಹಿಸುತ್ತಿದ್ದರೂ ಅಗ್ನಿ ಅನಾಹುತಗಳು ನಿಲ್ಲುವಂತೆ ಕಾಣುತ್ತಿಲ್ಲ.
ಬಹಳಷ್ಟು ಸಂದರ್ಭದಲ್ಲಿ ಜನರ ನಿರ್ಲಕ್ಷ್ಯದಿಂದಲೇ ಅಗ್ನಿ ಅನಾಹುತ ಸಂಭವಿಸುತ್ತಿರುವುದನ್ನು ಕಾಣಬಹುದಾಗಿದೆ. ಬಿಸಿಲಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಉರಿಯುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದು, ಅದರಂತೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ವಿದ್ಯುತ್ ತಂತಿ ಒಂದಕ್ಕೊಂದು ತಗುಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಎರಡು ಜೋಳದ ಕಡ್ಡಿಯ ಮೆದೆ ಮತ್ತು ಒಂದು ಕಾರು ಸಂಪೂರ್ಣ ಭಸ್ಮಗೊಂಡಿದೆ. ಶುಕ್ರವಾರ ಮಧ್ಯಾಹ್ನ ಕಂದೇಗಾಲದಲ್ಲಿ ಮೃತರಾದ ನಂಜಪ್ಪ ಎಂಬುವರ ಅಂತಿಮ ದರ್ಶನಕ್ಕೆ ಉಡಿಗಾಲ ಗ್ರಾಮದ ಮಾದಪ್ಪ ಎಂಬುವರು ತಮ್ಮ ಇಂಡಿಕಾ ಕಾರಿನಲ್ಲಿ ಬಂದಿದ್ದರು. ಅವರು ಕಾರನ್ನು ತೆಂಗಿನ ಮರದ ನೆರಳಿನಲ್ಲಿ ನಿಲ್ಲಿಸಿ ತೆರಳಿದ್ದರು.
ಮಧ್ಯಾಹ್ನ ನೆತ್ತಿ ಸುಡುವ ಬಿಸಿಲಿನ ಜತೆಯಲ್ಲೇ ಗಾಳಿ ಬಂದಿದ್ದು ಈ ಸಂದರ್ಭ ಅಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಎಳೆಯಲಾಗಿದ್ದ ವಿದ್ಯುತ್ ತಂತಿ ತಗುಲಿ ಕಿಡಿ ಹಾರಿ ಬೆಂಕಿ ಹೊತ್ತಿ ಉರಿದಿದೆ. ಪರಿಣಾಮ ಜೋಳದ ಕಡ್ಡಿಯ ಮೆದೆ ಹಾಗೂ ಅಲ್ಲೇ ನಿಲ್ಲಿಸಿದ ಇಂಡಿಕಾ ಕಾರಿಗೂ ಬೆಂಕಿ ತಗುಲಿದ್ದು, ಸಂಪೂರ್ಣ ಭಸ್ಮವಾಗಿದೆ. ಬೆಂಕಿಯ ಕೆನ್ನಾಲಿಗೆ ತೆಂಗಿನ ಮರಕ್ಕೂ ತಗುಲಿದ್ದು ಅವು ಸುಟ್ಟು ಹೋಗಿವೆ.
ದಟ್ಟ ಹೊಗೆ ಆವರಿಸಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡು ಎಲ್ಲರೂ ಓಡಿ ಬಂದರಾದರೂ ಬೆಂಕಿ ನಂದಿಸುವುದು ಸುಲಭದ ಕೆಲಸವಾಗಿರಲಿಲ್ಲ. ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿ ಅನಾಹುತದಿಂದ ಸುಮಾರು 5ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಂಡ್ಲುಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.