ಮಡಿಕೇರಿ: ಪ್ರಸಾರ ಭಾರತಿ ದೂರದರ್ಶನ ಕೇಂದ್ರ್ರ, ಮಡಿಕೇರಿ ಆಕಾಶವಾಣಿ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೊಡವ ಸಮುದಾಯದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಹಳೆಯ ಕನ್ನಡ ಚಲನ ಚಿತ್ರಗೀತೆಗಳ ವಿಶೇಷ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮ ಫೆ.26 ರಂದು ನಗರದ ಗಾಂಧಿ ಮೈದಾನದಲ್ಲಿ ಸಂಗೀತ ಪ್ರಿಯರನ್ನು ರಂಜಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕರಾದ ಎನ್.ಚಂದ್ರಶೇಖರ್, ಮಡಿಕೆೇರಿ ಆಕಾಶವಾಣಿ ನಿಲಯ ನಿರ್ದೇಶಕರಾದ ಎಂ. ರಾಘವೇಂದ್ರ ಹಾಗೂ ಅಕಾಡೆಮಿ ಅಧ್ಯಕ್ಷರಾದ ಬಿ.ಎಸ್. ತಮ್ಮಯ್ಯ, ಕೊಡಗಿನಲ್ಲಿ ಇದೇ ಪ್ರಪ್ರಥಮಬಾರಿಗೆ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಮ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಮಾಜಿ ಸಚಿವರಾದ ಎಂ.ಸಿ. ನಾಣಯ್ಯ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧುರ ಮಧುರವೀ ಮಂಜುಳಗಾನ ಸರಣಿ ಕಾರ್ಯಕ್ರಮದ 82ನೇ ಆವೃತ್ತಿ ಇದಾಗಿದ್ದು, ಇದರಲ್ಲಿ ಜಿಲ್ಲೆಯ ಪ್ರತಿಭಾವಂತ 14 ಪುರುಷ, 18 ಮಹಿಳೆಯರು ಮತ್ತು 10 ಮಂದಿ ಬಾಲ ಸಂಗೀತ ಪ್ರತಿಭೆೆಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ಪ್ರಮುಖವಾಗಿ 13 ಮಂದಿ ಕೊಡವ ಭಾಷಾ ಹಾಡುಗಾರರು ಪಾಲ್ಗೊಂಡು ಕೊಡವ ಭಾಷೆಯ ಸುಮಧುರ ಹಾಡುಗಳನ್ನು ಪ್ರಸ್ತುತ ಪಡಿಸಲಿಸಲಿದ್ದು, ಹಾಡಿನೊಂದಿಗೆ 10 ತಂಡಗಳ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಮಾಹಿತಿ ನೀಡಿದರು.
ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 10 ರಿಂದ 10.30ರ ಅವಧಿಯಲ್ಲಿ ಪ್ರಸಾರಗೊಳ್ಳುವ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ಹೆಚ್ಚು ವೀಕ್ಷಕರನ್ನು ಹೊಂದಿದ್ದು, ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮ ಕೂಡ ಚಂದನ ವಹಿನಿಯಲ್ಲಿ ಪರಾಸರವಾಗಲಿದೆ ಎಂದು ನಿರ್ದೇಶಕರಾದ ಎನ್.ಚಂದ್ರಶೇಖರ್ ತಿಳಿಸಿದರು.