ಮಡಿಕೇರಿ: ದೇಶವ್ಯಾಪಿ ಗೋಹತ್ಯೆಯನ್ನು ನಿಷೇಧಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ನಗರದ ಗಾಂಧಿ ಮೈದಾನದಲ್ಲಿ ಗೋ ಸತ್ಯಾಗ್ರಹವನ್ನು ನಡೆಸಿದವು.
ಗಾಂಧಿ ಮಂಟಪದ ಎದುರು ಪ್ರತಿಭಟನೆ ನಡೆಸಿದ ಹಿಂದೂ ಪರ ಸಂಘಟನೆಗಳ ಪ್ರಮುಖರು ದೇಶ ಹಾಗೂ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಲು ಮಿತಿ ಮೀರಿದ ಗೋಹತ್ಯೆಯೇ ಕಾರಣವೆಂದು ಅಭಿಪ್ರಾಯಪಟ್ಟರು.
ರಾಷ್ಟ್ರದಾದ್ಯಂತ ಗೋಹತ್ಯೆ ನಿಷೇಧಿಸಬೇಕು, ಗೋಹಂತಕರಿಗೆ 7 ವರ್ಷ ಜೈಲು ಶಿಕ್ಷೆ ನೀಡಿ 1 ಲಕ್ಷ ರೂ. ದಂಡ ವಿಧಿಸಬೇಕು, ಗೋ ಹಿಂಸೆ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಬೇಕು ಮತ್ತು ಗೋಸಾಗಾಟದ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ರಾಜ್ಯದಲ್ಲಿ ಗೋಮಾಳ ಭೂಮಿ ಸರ್ವೇ ಮಾಡಿ ಬೇಲಿ ಹಾಕಬೇಕು, ಹಸಿ ಹುಲ್ಲನ್ನು ಬೆಳೆಸಿ ಗೋವುಗಳ ಆಹಾರವಾಗಿ ರಿಯಾಯಿತಿ ದರದಲ್ಲಿ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಲ್ಲವನ್ನೂ ನೀಡುವ ಕಾಮಧೇನು ಎಂದು ಪೂಜಿಸಲ್ಪಡುವ ಗೋವುಗಳ ಹತ್ಯೆಯನ್ನು ತಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ದೇಶ ಬರ ಸೇರಿದಂತೆ ಭೀಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ ಆತಂಕ ವ್ಯಕ್ತಪಡಿಸಿದರು. ಅನಾದಿ ಕಾಲದಿಂದಲೂ ರಾಷ್ಟ್ರದಲ್ಲಿ ಗೋ ಹತ್ಯೆ ನಿಷೇಧವಿತ್ತು. ಆದರೆ ಇಂದು ಕೆಲವರು ಆಹಾರ ಪದ್ಧತಿಯ ನೆಪದಲ್ಲಿ ಗೋವುಗಳನ್ನು ನಿರಂತರವಾಗಿ ಹತ್ಯೆ ಮಾಡುತ್ತಿರುವುದರಿಂದ ಗೋವಿನ ಸಂತತಿ ನಾಶವಾಗುತ್ತಿದೆ. ಗೋಸಂತತಿ ಅವನತಿಯತ್ತ ಸಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳೂ ಕುಂಠಿತಗೊಂಡಿದೆ. ದೇಶದಾದ್ಯಂತ ಬಹುಪಾಲು ಜನರು ಗೋಹತ್ಯೆ ನಿಷೇಧವನ್ನು ಬಯಸುತ್ತಿದ್ದಾರೆ. ಆದ್ದರಿಂದ ರಾಷ್ಟ್ರದಾದ್ಯಂತ ಸಾಧು ಸಂತರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿರುವುದಾಗಿ ಅವರು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೋಹತ್ಯೆ ನಿಷೇಧಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭ ಶಾಸಕದ್ವಯರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಗೋರಕ್ಷಾ ಪ್ರಮುಖ್ ಮುರುಳಿ ಕೃಷ್ಣ, ಜಿ.ಪಂ ಮಾಜಿ ಅಧ್ಯಕ್ಷರಾದ ರವಿಕುಶಾಲಪ್ಪ, ಬಜರಂಗದಳದ ಜಿಲ್ಲಾ ಸಂಚಾಲಕರಾದ ಎನ್.ಕೆ.ಅಜಿತ್ ಕುಮಾರ್, ಸಹ ಸಂಚಾಲಕ ಕೆ.ಹೆಚ್.ಚೇತನ್, ಮಡಿಕೇರಿ ತಾಲೂಕು ಸಂಚಾಲಕ ಮನು ರೈ, ಪ್ರಮುಖರಾದ ಬಲ್ಲಾರಂಡ ಕಂಠಿ ಕಾರ್ಯಪ್ಪ, ಸಾಧುಸಂತರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು. ಭಜನಾ ತಂಡಗಳು ಭಜನೆಯ ಮೂಲಕ ಗೋ ಜಾಗೃತಿ ಮೂಡಿಸಿದರು. ಸಾಧು ಸಂತರ ಮೂಲಕ ಗೋ ಪೂಜೆಯೂ ನಡೆಯಿತು.