ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಏಕಪಕ್ಷೀಯ ನಿರ್ಧಾರಗಳಿಂದ ಜನ ಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳು ಸೇರಿದಂತೆ, ಆರ್ಥಿಕ ಕ್ಷೇತ್ರದ ವೈಫಲ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಎಐಸಿಸಿ ಮತ್ತು ಕೆಪಿಸಿಸಿ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಐದು ಬ್ಲಾಕ್ ಗಳಲ್ಲಿ ಮಾ.4 ರಿಂದ 7 ರವರೆಗೆ ‘ಜನ ವೇದನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪ್ರಬಾರ ಜಿಲ್ಲಾಧ್ಯಕ್ಷರಾದ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದ ಜನವಿರೋಧಿ ನಿಲುವುಗಳಿಂದ ಜನ ಸಮಾನ್ಯರಿಗೆ, ಶ್ರಮಿಕ ವರ್ಗಕ್ಕೆ, ಮಹಿಳೆಯರಿಗೆ ಸಾಕಷ್ಟು ತೊಂದರೆಗಳಾಗಿದೆ. ನೋಟು ಅಮಾನ್ಯೀಕರಣದಂತಹ ಏಕಪಕ್ಷೀಯ ನಿರ್ಧಾರದಿಂದ ಆರ್ತಿಕ ಸಂಕಷ್ಟ ಎದುರಾಗಿ ಅರಾಜಕತೆ ಮೂಡಿದೆ ಎಂದು ಆರೋಪಿಸಿದರು. ಈ ರೀತಿಯ ವಾಸ್ತವಗಳನ್ನು ಜನ ವೇದನ ಕಾರ್ಯಕ್ರಮದಲ್ಲಿ ಜನರ ಮುಂದಿಡಲಾಗುತ್ತದೆ ಎಂದರು.
‘ಜನ ವೇದನ’ ಕಾರ್ಯಕ್ರಮ ಮಾ.4 ರಂದು ಸಂಜೆ 4 ಗಂಟೆಗೆ ಕುಶಾಲನಗರದಲ್ಲಿ, ಮಾ.5 ರಂದು ಬೆ.11 ಗಂಟೆಗೆ ಸುಂಟಿಕೊಪ್ಪ, ಮಾ.6 ರಂದು ಬೆ.11 ಗಂಟೆಗೆ ಭಾಗಮಂಡಲ, ಸಂಜೆ 4 ಗಂಟೆಗೆ ಪೊನ್ನಂಪೇಟೆ, ಮಾ.7 ರಂದು ಬೆ.11 ಗಂಟೆಗೆ ವೀರಾಜಪೇಟೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಸಂದರ್ಭ ವೇದಿಕೆಯಲ್ಲಿ ‘ಮೋದಿ ಕುರ್ಚಿ’ ಯನ್ನು ಅಳವಡಿಸಲಾಗುತ್ತದೆ. ಆ ಮೂಲಕ ಪ್ರಧಾನಿಗಳು ಎದುರಿನಲ್ಲಿದ್ದಾರೆನ್ನುವ ಪರಿಕಲ್ಪನೆಯಂತೆ ಅವರ ತಪ್ಪು ನಿರ್ಧಾರಗಳು, ಅದರಿಂದ ಎದುರಾಗಿರುವ ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು. ಹೋಬಳಿ ಮಟ್ಟದ ಸಭೆಯಲ್ಲಿ ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು, ಜಿಪಂ ಪ್ರಮುಖರು, ಉಸ್ತುವಾರಿ ಸಚಿವರು, ಎಐಸಿಸಿ, ಕೆಪಿಸಿಸಿ ಪ್ರಮುಖರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಜನವೇದನ ಕಾರ್ಯಕ್ರಮದ ಮೂಲಕ ಪ್ರಮುಖವಾಗಿ ನೋಟುಗಳ ಅಮಾನ್ಯೀಕರಣದಿಂದ ರಾಷ್ಟ್ರದ ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಯತ್ನ ನಡೆಸಲಾಗುತ್ತದೆ. ಮೋದಿ ಅವರು ಆರ್ಥಿಕ ತಜ್ಞರೇನೂ ಅಲ್ಲ. ಹೀಗಿದ್ದೂ ಅವರು ಯಾರ ಸಲಹೆಯನ್ನೂ ಪಡೆಯದೆ ನೋಟು ಅಮಾನ್ಯೀಕರಣದ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಸಮಸ್ಯೆ 50 ದಿನಗಳಲ್ಲಿ ಸುಧಾರಿಸುತ್ತದೆಂದು ತಿಳಿಸಲಾಗಿತ್ತು. ಇದರಿಂದ ಸಣ್ಣ ಕೈಗಾರಿಕೆಗಳು, ಖಾಸಗಿ ಉದ್ದಿಮೆಗಳು ಮುಚ್ಚಿ ಹೋಗಿರುವ ಕಟು ವಾಸ್ತವ ನಮ್ಮ ಮುಂದಿದೆ. ರಾಷ್ಟ್ರದಲ್ಲಿ ಶೇ.60ರಷ್ಟು ಮಂದಿ ಅನಕ್ಷರಸ್ತರಾಗಿದ್ದು, ‘ಕ್ಯಾಶ್ ಲೆಸ್’ ವ್ಯವಹಾರ ಫಲ ನೀಡುವುದೇ ಎಂದು ಟಿ.ಪಿ.ರಮೇಶ್ ಪ್ರಶ್ನಿಸಿದರು.
ಬ್ಯಾಂಕ್ಗಳಲ್ಲಿ ಖಾತೆದಾರರು ಇಡುವ ಹಣಕ್ಕೆ ಬಡ್ಡಿ ದರ ಕಡಿಮೆ ಮಾಡಲಾಗುತ್ತಿದೆ. ಆದರೆ ಸಾಲದ ಮೇಲಿನ ಬಡ್ಡಿದರವನ್ನು ಮಾತ್ರ ಇಳಿಕೆ ಮಾಡುತ್ತಿಲ್ಲ. ಜನಸಾಮಾನ್ಯರ ಮೇಲೆ ತೆರಿಗೆಗಳ ಹೊರೆಯೂ ಹೆಚ್ಚಾಗುತ್ತಿದ್ದು, ಏಕ ರೀತಿಯ ತೆರಿಗೆ ಪದ್ದತಿ ಜಾರಿಗೆ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆನ್ನುವ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಟಿ.ಪಿ.ರಮೇಶ್, ಟೀಕೆಗೂ ಮೊದಲು ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುವುದು ಸೂಕ್ತವೆಂದರು. ಬರ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ತಾಲ್ಲುಕುಗಳಿಗೆ ತಲಾ 80 ಲಕ್ಷ ಅನುದಾನ, ಮೇವಿಗೆ 20 ಲಕ್ಷ ಅನುದಾನ ಒದಗಿಸಲಾಗಿದೆ. ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಸತತ ಮೂರನೇ ಬಾರಿಗೆ 50 ಕೋಟಿ ರೂ. ನೆರವನ್ನು ರಾಜ್ಯ ಸರ್ಕಾರ ನೀಡಿದೆ.
ಲೋಕೋಪಯೋಗಿ ಇಲಾಖೆಗೆ 36 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಕುಶಾಲನಗರ ಪಟ್ಟಣದ ಅಭಿವೃದ್ಧಿಗೆ ದಿನೇಶ್ ಗುಂಡೂರಾವ್ ಅವರು ಕಾಳಜಿ ವಹಿಸಿ 5 ಕೋಟಿ ರೂ.ಅನುದಾನ ನೀಡಿದ್ದಾರೆ ಎಂದರು. ಜಿಲ್ಲೆಯಲ್ಲಿ 6 ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ, ಕೂಡಿಗೆ-ಸೋಮವಾರಪೇಟೆ ರಸ್ತೆ ಅಭಿವೃದ್ಧಿಗೆ 16 ಕೋಟಿ, ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ನೆರವನ್ನು ರಾಜ್ಯ ಸರ್ಕಾರ ಒದಗಿಸಿದೆ ಎಂದು ಟಿ.ಪಿ.ರಮೇಶ್ ತಿಳಿಸಿದರು.
ಜಿಲ್ಲೆಯಲ್ಲಿ 2014ನೇ ಸಾಲಿನಲ್ಲಿ ಭಾರೀ ಮಳೆಯಾಗಿ ಉಂಟಾದ ಕಾಫಿ ಫಸಲು ಸೇರಿದಂತೆ ಕೃಷಿ ಹಾನಿಗೆ 20 ಕೋಟಿ ಒದಗಿಸುವಂತೆ ಕೇಂದ್ರ್ರಕ್ಕೆ ಮನವಿ ಮಾಡಲಾಗಿತ್ತು. ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ, ಸಂಸದರು ಈ ನಿಟ್ಟಿನಲ್ಲಿ ಏನು ಮಾಡಿದ್ದಾರೆ ಎಂದು ಪ್ರ್ರಶ್ನಿಸಿದ ಅವರು ಕುಶಾಲನಗರದವರೆಗೆ ರೈಲು ಸಂಪರ್ಕ ಒದಗಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆಯೇ ಹೊರತು ಈ ನಿಟ್ಟಿನಲ್ಲಿ ಯಾವ ಪ್ರಯತ್ನಗಳೂ ಆಗಿಲ್ಲ. ಪ್ರವಾಸೋದ್ಯಮದಲ್ಲಿ ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಆದರೆ ಇದರ ಬೆಳವಣಿಗೆಗೆ ಪೂರಕವಾಗಿ ಕೇಂದ್ರ್ರದ ಪ್ರವಾಸೋದ್ಯಮ ಸಚಿವರನ್ನು ಕರೆಸುವ ಪ್ರಯತ್ನ ಸಂಸದರಿಂದ ನಡೆದಿಲ್ಲವೆಂದು ಟೀಕಿಸಿದರು. ಪ್ರಸ್ತುತ ಬಿಜೆಪಿ ಮಂದಿ ರಾಜಕಾರಣದ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಹುಸೇನ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜನವೇದನ ಕಾರ್ಯಕ್ರಮವನ್ನು ನಡೆಸುವ ಕುರಿತು ನಿರ್ಧರಿಸಲಾಗಿದ್ದು, ಜನಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಸದೃಢವಾಗಿದೆ ಎಂದು ಸಾಬೀತು ಪಡಿಸಲಾಗುವುದೆಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೆೇರಿ ಬ್ಲಾಕ್ ಅಧ್ಯಕ್ಷ ಕೆ.ಎಂ. ಗಣೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್, ಪ್ರಮುಖರಾದ ನೆರವಂಡ ಉಮೇಶ್ ಹಾಗೂ ಜಿಪಂ ಸದಸ್ಯೆ ಸುನೀತ ಉಪಸ್ಥಿತರಿದ್ದರು.