ಮಡಿಕೇರಿ: ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಅನುಷ್ಠಾನ ಹಾಗೂ ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀಕಾಂತರಾಜು ಅವರ ವರದಿಯ ಘೋಷಣೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ)ಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ದಸಂಸ ಕೊಡಗು ಜಿಲ್ಲಾ ಸಮಿತಿ ಸಂಚಾಲಕ ಮೋಹನ್ ಮೂಗನಾಡು ಅವರ ನೇತೃತ್ವದಲ್ಲಿ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಮಿತಿ ಸಂಚಾಲಕ ಮೋಹನ್ ಮೂಗನಾಡು, ಪರಿಶಿಷ್ಟ ಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ-ಗತಿ ಅರಿಯಲು ಸಂವಿಧಾನ ಬದ್ಧವಾಗಿ ರಚನೆ ಮಾಡಲಾದ ನ್ಯಾ. ಎ.ಜೆ ಸದಾಶಿವ ನೇತೃತ್ವದ ಆಯೋಗದ ವರದಿಯನ್ನು ಜಾರಿ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ವರದಿಯ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅದಿವೇಶನದಲ್ಲಿ ಅಂಗೀಕರಿಸಿ ಸಂವಿಧಾನ ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ರಾಜ್ಯದ 6ಕೋಟಿ ಜನಸಂಖ್ಯೆಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಶಾಸ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀಕಾಂತರಾಜು ಅವರ ವರದಿಯನ್ನು ಘೋಷಣೆ ಮಾಡಬೇಕೆಂದು ಮೋಹನ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಗಾಯತ್ರಿ ನರಸಿಂಹ, ಎಂ.ಎ ಮನ್ಸೂರ್, ಹೆಚ್.ಜೆ ರಾಚಯ್ಯ, ಲಿಂಗರಾಜು, ಜಿಲ್ಲಾ ಖಚಾಂಚಿ ಗಿರೀಶ್ ಪಗಡಿಗತ್ತಲ, ವಿರಾಜಪೇಟೆ ತಾಲೂಕು ಸಮಿತಿ ಸಂಚಾಲಕ ಹೆಚ್.ಇ ಬಸವರಾಜು, ಸಂಘಟನಾ ಸಂಚಾಲಕರಾದ ಮಹದೇವ ಮತ್ತಿತರರು ಪಾಲ್ಗೊಂಡಿದ್ದರು.