ಮಾಗಡಿ: ಶತಮಾನ ಕಂಡಿದ್ದ ಆಲದ ಮರವೊಂದು ಬೇರು ಸಹಿತ ಕಿತ್ತು ಬಿದ್ದ ಘಟನೆಯೊಂದು ತಾಲೂಕಿನ ನಾಯಕಪಾಳ್ಯ ಗೇಟ್ ಬಳಿ ನಡೆದಿದ್ದು, ಪರಿಣಾಮ ಎರಡು ಅಂಗಡಿ ಒಂದು ಮನೆ ಜಖಂಗೊಂಡಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಶಿಥಿಲಗೊಂಡಿದ್ದ ಮರ ಬೀಳುವ ಸ್ಥಿತಿಯಲ್ಲಿತ್ತಾದರೂ ಇಷ್ಟು ಬೇಗ ಬೀಳುತ್ತದೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹಗಲು ಹೊತ್ತಿನಲ್ಲಿ ಮರ ಬಿದ್ದಿದ್ದರೆ ಪ್ರಾಣಹಾನಿಯಾಗುವ ಸಂಭವವಿತ್ತು. ಆದರೆ ಮುಂಜಾನೆ ವೇಳೆ ಬಿದ್ದಿದ್ದು, ಈ ಸಂದರ್ಭ ಜನರು ಇರಲಿಲ್ಲ. ಹೀಗಾಗಿ ಮರದ ಪಕ್ಕದಲ್ಲಿದ್ದ ಟೀ ಅಂಗಡಿ, ಕ್ಷೌರದ ಅಂಗಡಿ, ಪೆಟ್ಟಿಗೆ ಅಂಗಡಿಗೆ ಹಾನಿಯಾಗಿದೆ. ಪಕ್ಕದ ಮನೆಯ ಛಾವಣಿಗೆ ಹಾಕಿದ್ದ ಶೀಟುಗಳು ಜಖಂಗೊಂಡಿವೆ.
ಮನೆಯಲ್ಲಿ ಮಾಲಕಿ ಗಾಯಿತ್ರಮ್ಮ(60) ಮಲಗಿದ್ದರು ಎನ್ನಲಾಗಿದ್ದು, ಮರ ಬೀಳುವ ರಭಸಕ್ಕೆ ಛಾವಣಿಯ ಶೀಟ್ ಗಳು ಬಿದ್ದ ಸಂದರ್ಭ ಫ್ಯಾನ್ ತುಂಡಾಗಿ ಅವರ ಮೇಲೆ ಬಿದ್ದಿದ್ದರಿಂದ ಭುಜ ಮತ್ತು ಕಾಲಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಪ್ರಾಣಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇನ್ನು ಟೀ ಅಂಗಡಿ ಮಾಲೀಕ ದಿನೇಶ್ ಪ್ರತಿದಿನವೂ ಅಂಗಡಿಯಲ್ಲೇ ಮಲಗುತ್ತಿದ್ದರಾದರೂ ಅದೃಷ್ ವಶಾತ್ ಅವರು ಮಲಗಿರಲಿಲ್ಲ.
ಒಟ್ಟಾರೆ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿರುವುದರಿಂದ ಎಲ್ಲರೂ ನಿಟ್ಟುಸಿರು ಬಿಡುವಂತೆ ಮಾಡಿದೆ. ಮರ ಬಿದ್ದು ಹಾನಿ ಸಂಭವಿಸುವುದರಿಂದ ಅಂಗಡಿ ಮಾಲೀಕರು ಆತಂಕಗೊಂಡಿದ್ದಾರೆ. ಲಕ್ಷಾಂತರ ರೂ ಹಾನಿ ಸಂಭವಿಸಿರುವುದರಿಂದ ಅವರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.