ಮಡಿಕೇರಿ: ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಪರ ಸಂಘಟನೆಗಳ ಸದಸ್ಯರ ಹತ್ಯೆಗೆ ಕಮ್ಯೂನಿಸ್ಟ್ ಕಾರಣವೆಂದು ಆರೋಪಿಸಿ ಮತ್ತು ಕೇರಳ ಸರಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸಂಘಟನೆಯ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಪ್ರಮುಖರು ಕೇರಳ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕೇರಳ ಸರಕಾರವನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಕೇರಳ ಮುಖ್ಯಮಂತ್ರಿ ಪರ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ಸರಕಾರದ ಆಹಾರ ಖಾತೆ ಸಚಿವ ಯು.ಟಿ.ಖಾದರ್ ಅವರು ಪಾದರಕ್ಷೆಯನ್ನು ತಲೆಯ ಮೇಲಿಟ್ಟುಕೊಂಡು ವಿಧಾನಸಭೆಗೆ ಬರಲಿ ಎಂದು ಸವಾಲು ಹಾಕಿದರು.
ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ ಕೇರಳದಲ್ಲಿ ಅರಾಜಕತೆ ಮೂಡಿದ್ದು, ಹಿಂದೂಗಳ ಹತ್ಯಾಕಾಂಡ ಅತ್ಯಂತ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಹಿಂದೂಗಳ ಮೇಲಿನ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂದ ಅವರು ಇನ್ನು ಮುಂದಾದರೂ ಕೇರಳ ಸರಕಾರ ಮತ್ತು ಕಮ್ಯುನಿಸ್ಟರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದು ಒತ್ತಾಯಿಸಿದರು.
ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸಂಘಟನೆಯ ಜಿಲ್ಲಾ ಸಂಚಾಲಕ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿ ಕಮ್ಯುನಿಸ್ಟರು ಕೇರಳ ರಾಜ್ಯದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದು, ವಿವಾಹ ಸಮಾರಂಭವನ್ನು ಕೂಡ ಈ ಪಕ್ಷದ ಸೂಚನೆಯಂತೆ ನಡೆಸಬೇಕಾದ ದುಸ್ಥಿತಿ ಸೃಷ್ಟಿಯಾಗಿದೆ. ಕೇರಳದಲ್ಲಿ ಎಲ್ಡಿಎಫ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಸಂಘಟನೆ ಮತ್ತು ರಾಷ್ಟ್ರೀಯವಾದಿ ಕಾರ್ಯಕರ್ತರ ಕೊಲೆಗಳು ಹೆಚ್ಚುತ್ತಿದೆ ಎಂದು ಆರೋಪಿಸಿದರು. ಹಿಂಸಾತ್ಮಕ ಕೃತ್ಯಗಳನ್ನು ನಿಯಂತ್ರಿಸಲಾಗದ ಕೇರಳ ಸರಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಮ್ಯುನಿಸ್ಟರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜಿ.ಪಂ ಅಧ್ಯಕ್ಷರಾದ ಬಿ.ಎ.ಹರೀಶ್, ಮಾಜಿ ಅಧ್ಯಕ್ಷರಾದ ರವಿಕುಶಾಲಪ್ಪ, ಮಾಜಿ ಉಪಾಧ್ಯಕ್ಷರಾದ ಬೀನಾಬೊಳ್ಳಮ್ಮ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಮುನಾ, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಜೈನಿ ಮತ್ತಿತರ ಪ್ರಮುಖರು ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.