ಚಾಮರಾಜನಗರ: ತಿರುಪತಿ ತಿರುಮಲದಲ್ಲಿ ಕಾಣಿಕೆ ಸಂಗ್ರಹದಲ್ಲಿ ಇಳಿಕೆ ಕಂಡಿದ್ದರೆ, ಪವಾಡ ಪುರುಷ ಮಹೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಯ ವೇಳೆ ಭಾರಿ ಪ್ರಮಾಣದ ಕಾಣಿಕೆಗಳು ಸಂಗ್ರಹವಾಗಿದ್ದು ಕೇವಲ 29 ದಿನಗಳಲ್ಲಿ ಒಂದು ಕೋಟಿ ಐವತ್ತು ಲಕ್ಷ ರೂ ಕಾಣಿಕೆ ಸಂಗ್ರಹವಾಗಿದ್ದು, ಇದು ದಾಖಲೆಯ ಕಾಣಿಕೆ ಸಂಗ್ರಹ ಎಂದು ಹೇಳಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ನಡೆದ ವೇಳೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಇವರು ಕಾಣಿಕೆ ಹಾಕುವ ಮೂಲಕ ಹರಕೆ ತೀರಿಸಿದ್ದು ಇದರಿಂದ ಮಲೆ ಮಹದೇಶ್ವರ ದೇವಾಲಯಕ್ಕೆ ಕೋಟ್ಯಂತರ ರೂ. ಆದಾಯ ಬಂದಿದೆ. ಇತ್ತೀಚೆಗೆ ಗೋಲಕದಲ್ಲಿ ಸಂಗ್ರಹವಾಗದ್ದ ಕಾಣಿಕೆ ಹಣವನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಏಣಿಕೆ ಮಾಡಲಾಗಿದ್ದು, ಈ ಸಂದರ್ಭ ಒಂದು ಕೋಟಿ ಐವತ್ತು ಲಕ್ಷದ ಐವತ್ತೊಂದು ಸಾವಿರದ ಏಳನೂರ ಇಪ್ಪತ್ತೂರು ರೂಪಾಯಿಗಳು ಸಂಗ್ರಹವಾಗಿದ್ದು, ಇದು ದಾಖಲೆಯ ಕಾಣಿಕೆ ಸಂಗ್ರಹ ಎಂದು ದೇವಾಲಯ ಮೂಲಗಳು ಹೇಳಿವೆ.
ಇಷ್ಟೇ ಅಲ್ಲದೆ ಕಾಣಿಕೆಯೊಂದಿಗೆ ನಿಷೇಧಿತ ಸಾವಿರ ಮತ್ತು ಐನೂರು ರೂಪಾಯಿಗಳ ನೋಟುಗಳು ಸಹ ಸಂಗ್ರಹವಾಗಿದ್ದು, ನಿಷೇದಿತ ಸಾವಿರ ರೂಪಾಯಿ ಮೌಲ್ಯದ 35 ನೋಟುಗಳು ಹಾಗೂ ನಿಷೇಧಿತ ಐನೂರು ರೂಪಾಯಿ ಮೌಲ್ಯದ 233 ನೋಟುಗಳ ಜೊತೆ ಒಂದು ಕೆ.ಜಿ. ಮುನ್ನೂರು ಗ್ರಾಂ ಬೆಳ್ಳಿ ಪದಾರ್ಥಗಳು, ಹಾಗೂ 60 ಗ್ರಾಂ ಚಿನ್ನದ ಮಾದರಿಯ ಪದಾರ್ಥಗಳು ಎಣಿಕೆ ಸಂದರ್ಭ ಹುಂಡಿಯಲ್ಲಿ ಸಿಕ್ಕಿವೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಬಸವರಾಜು ತಿಳಿಸಿದ್ದಾರೆ.