ಮಾಗಡಿ: ಬದುಕಿ ಬಾಳಬೇಕಾದ ಬಾಲಕಿಯೊಬ್ಬಳು ನಾಪತ್ತೆಯಾಗಿ ಇದೀಗ ಶವವಾಗಿ ದೊರೆತಿದ್ದು, ಆಕೆಯನ್ನು ವಾಮಾಚಾರಕ್ಕೆ ಬಳಸಲಾಗಿದೆಯೇ? ಎಂಬ ಸಂಶಯ ಇದೀಗ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಾಗಡಿ ಪಟ್ಟಣದ ಗುಲಾಬ್ ಎಂಬುವರ ಪುತ್ರಿ ಆಯೇಷಾ (10) ಬಾಲಕಿ ಎಂಬ ಬಾಲಕಿಯೇ ನಾಪತ್ತೆಯಾಗಿ ಬಳಿಕ ಶವವಾಗಿ ಸಿಕ್ಕಿರುವ ದುರ್ದೈವಿ. ಕೆಲವರು ಅತ್ಯಾಚಾರ ಎಸಗಿ ಕೊಲೆಗೈದು ಬಳಿಕ ಗೋಣಿಚೀಲದಲ್ಲಿ ತುಂಬಿಸಿ ಎಸೆದಿದ್ದಾರೆ ಎಂದರೆ, ಮತ್ತೆ ಕೆಲವರ ಪ್ರಕಾರ ವಾಮಾಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ತಕ್ಕಂತೆ ಬಾಲಕಿಯ ದೇಹದಲ್ಲಿ ವಾಮಾಚಾರ ಮಾಡಿರುವ ಗುರುತುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಮಾ.1ರಂದು ಬುಧವಾರ ರಾತ್ರಿ 9ರ ಸಮಯದಲ್ಲಿ ಬಾಲಕಿ ಆಯೇಷಾ ಗೆಳತಿಗೆ ಮನೆಗೆ ಹೋಗಿದ್ದಳು ಆದರೆ ಮರಳಿ ಬಾರದೆ ನಾಪತ್ತೆಯಾಗಿದ್ದಳು. ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಸಿಗಲಿಲ್ಲ. ಈ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹರಡಿದ್ದವು. ಆದರೆ ಶುಕ್ರವಾರ ಮಾಗಡಿ ಪಟ್ಟಣದ ಕಲ್ಯಾಗೇಟ್ ಸಮೀಪ ಹೊಸಹಳ್ಳಿಯ ಮುಖ್ಯ ರಸ್ತೆಯ ಶಾದಿಮಹಲ್ ಹಿಂದೆ ಕಸದ ತೊಟ್ಟಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿ ಶವವನ್ನು ಹಾಕಲಾಗಿತ್ತು. ಇದನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿ ಸ್ಥಳಕ್ಕೆ ಬಂದ ಪೊಲೀಸರು ಮೂಟೆಯನ್ನು ಬಿಚ್ಚಿದಾಗ ಅದರಲ್ಲಿ ಆಯೇಷಾಳ ಶವ ಪತ್ತೆಯಾಗಿತ್ತು. ಕೈ ಮತ್ತು ಬಾಯಿಗೆ ಬಟ್ಟೆ ಕಟ್ಟಲಾಗಿತ್ತು. ಶಾದಿಮಹಲ್ ಪಕ್ಕದಲ್ಲೇ ವಾಮಾಚಾರದ ಮಾಡಿರುವ ಗುರುತುಗಳು ಕಂಡು ಬಂದಿತ್ತು. ಅಲ್ಲಿ ನಿಂಬೆಹಣ್ಣು ಹೂ ಇತ್ತು. ಹೀಗಾಗಿ ನಿಧಿಯಾಸೆಗೆ ಬಲಿ ನೀಡಿರಬಹುದು ಎಂಬ ಶಂಕೆ ದಟ್ಟವಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃತ್ತ ನಿರೀಕ್ಷಕ ನಂದೀಶ್ ಹಾಗೂ ಪಿಎಸ್ಐ ಮಂಜುನಾಥ್ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.