ಮೂಡಿಗೆರೆ: ತಹಸೀಲ್ದಾರ್ ಕಳೆದ 15 ದಿನಗಳಿಂದ ಕಳೆದು ಹೋಗಿದ್ದಾರೆ. ಕೂಡಲೇ ತಹಸೀಲ್ದಾರರನ್ನು ಹುಡುಕಿಕೊಡಿ. ಅಯ್ಯಯ್ಯೋ ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ವಾ ಎನ್ನುವ ಘೋಷಣೆಯೊಂದಿಗೆ ವಿನೂತನ ಶೈಲಿಯಲ್ಲಿ ತಾಲೂಕು ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ದಿಡೀರ್ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಮಂಜುನಾಥ್ ಗೌಡ ಮಾತನಾಡಿ, ತಾಲೂಕಿನಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ. 164 ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲ. ಬಾವಿಗಳು, ಹಳ್ಳ-ಕೊಳ್ಳ, ಕೆರೆ-ಕಟ್ಟೆ, ನದಿಗಳು ಬತ್ತಿ ಹೋಗಿವೆ. ರೈತರ ಸಂಕಷ್ಟ ಹೇಳತೀರದಾಗಿದೆ. ಬರ ಕಾಮಗಾರಿಗಳಿಗೆ ಅನುದಾನ ನೀಡುವ ಕೆಲಸ ಚೆಕ್ಗಳಿಗೆ ತಹಸೀಲ್ದಾರರು ಸಹಿ ಹಾಕದೇ ನೆನಗುದಿಗೆ ಬಿದ್ದಿದೆ. ಕಾಮಗಾರಿಗಳು ಕುಂಟಿತಗೊಂಡಿದೆ. ತಾಲೂಕು ಆಡಳಿತ ಸಂಪೂರ್ಣ ಕುಸಿತಕ್ಕೊಳಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ಜೆಡಿಎಸ್ನವರಾದರೆ, ಎಂಎಲ್ಸಿಯು ಡಾ.ಮೋಟಮ್ಮ ಕಾಂಗ್ರೆಸ್ ಮತ್ತು ಎಂ.ಕೆ.ಪ್ರಾಣೇಶ್ ಬಿಜೆಪಿಗರು. ಮೂವರಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ದೃಷ್ಟಿಕೋನವಾಗಿದ್ದು, ಅಧಿಕಾರಿಗಳನ್ನು ಕೆಲಸ ನಿರ್ವಹಿಸಲು ಬಿಡುತ್ತಿಲ್ಲ. ಈ ಮೂವರ ಒತ್ತಡಕ್ಕೆ ಅಧಿಕಾರಿಗಳು ಹೇಳದೇ ಕೇಳದೆ ಓಡಿ ಹೋಗುವವರೆಗೂ ರಾಜಕಾರಣ ನಡೆಯುತ್ತಿದೆ ಎಂದ ಅವರು, ಇನ್ನು 4 ದಿನದಲ್ಲಿ ಸರಕಾರ ತಹಸೀಲ್ದಾರರನ್ನು ನೇಮಿಸಬೇಕು. ಇಲ್ಲವಾದರೆ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.