ಚಿಕ್ಕಮಗಳೂರು: ಬೇಲೂರಿನ ಯಗಚಿ ಡ್ಯಾಂ ನೀರನ್ನ ಹಾಸನಕ್ಕೆ ಹರಿಸ್ತಿರೋದನ್ನ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಚಿಕ್ಕಮಗಳೂರು ಬಂದ್ ಬಹುತೇಕ ಯಶಸ್ವಿಯಾಗಿದೆ.
ಕುಡಿಯೋ ನೀರಿನ ಸಮಸ್ಯೆಯಾದ್ದರಿಂದ ವರ್ತಕರು ಕೂಡ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳ ಬಾಗಿಲು ಹಾಕಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಮಲತಾಯಿ ಧೋರಣೆಯನ್ನ ನಿಲ್ಲಿಸಿ, ಹಾಸನಕ್ಕೆ ಹರಿಯುತ್ತಿರೋ ನೀರನ್ನ ನಿಲ್ಲಿಸದಿದ್ರೆ ಯಗಚಿ ಡ್ಯಾಂ ಎದುರು ಅಹೋರಾತ್ರಿ ಧರಣಿ ನಡೆಸೋದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಇತಿಹಾಸದಲ್ಲಿ ಕಂಡು-ಕೇಳರಿಯದ ಭೀಕರ ಬರಕ್ಕೆ ಕಾಫಿನಾಡು ತತ್ತರಿಸಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ನಾಲ್ಕು ಬರಪೀಡಿತವೆಂದು ಘೋಷಣೆಯಾಗಿದೆ. ಇಷ್ಟು ದಿನ, ಚಿಕ್ಕಮಗಳೂರು ನಗರಕ್ಕೆ ಬೇಲೂರು ತಾಲೂಕಿನ ಯಗಚಿ ಡ್ಯಾಂನಿಂದ ಕುಡಿಯೋ ನೀರಿನ ಸೌಲಭ್ಯ ಒದಗಿಸಲಾಗಿತ್ತು. ಆದ್ರೆ, ಸರ್ಕಾರ ಚಿಕ್ಕಮಗಳೂರಿಗೆ ಕುಡಿಯೋ ನೀರನ್ನ ಸ್ಥಗಿತಗೊಳಿಸಿ ಹಾಸನಕ್ಕೆ ಹರಿಸ್ತಿರೋದ್ರಿಂದ ಕಾಫಿನಾಡಿಗರಿಗೆ ಕುಡಿಯೋ ನೀರಿನ ಸಮಸ್ಯೆ ಮಿತಿಮೀರಲಿದೆ. ಆದ್ದರಿಂದ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕಾಫಿನಾಡಿಗರು ಬೀದಿಗಿಳಿದು ಪ್ರತಿಭಟಿಸಿದರು. ನಗರದಲ್ಲಿ 35 ವಾರ್ಡ್ಗಳಿದ್ದು ಕುಡಿಯೋ ನೀರಿನ ಸಮಸ್ಯೆ ಹೆಚ್ಚಿದೆ. ಇಂತಹಾ ಸಂದರ್ಭದಲ್ಲಿ ಸರ್ಕಾರ ನೀರನ್ನ ಹಾಸನಕ್ಕೆ ಹರಿಸ್ತಿದ್ದು ಇಲ್ಲಿನೋರ ಬಗ್ಗೆ ಯೋಚಿಸದಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಹಾಸನಕ್ಕೆ ಹರಿಯುತ್ತಿರೋ ನೀರಿನ್ನು ನಿಲ್ಲಿಸದಿದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗಿನಿಂದಲೂ ನಗರದ ಅಂಗಡಿ-ಮುಗ್ಗಟ್ಟುಗಳೆಲ್ಲಾ ಬಂದ್ ಆಗಿದ್ದು, ಅಲ್ಲೊಂದು-ಇಲ್ಲೊಂದು ತೆರೆದಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಬಾಗಿಲು ಹಾಕ್ಸಿದ್ರು. ಆಟೋಗಳು ಕೂಡ ರಸ್ತೆಗಿಳಿದಿರಲಿಲ್ಲ. ಚಿಕ್ಕಮಗಳೂರು ಡಿಪೋಗೆ ಸೇರಿದ ಬಸ್ಗಳು ಕೂಡ ಸಂಚಾರ ನಿಲ್ಲಿಸಿದ್ದರು. ರಸ್ತೆ ಮಧ್ಯೆಯಲ್ಲಿ ಟೈರ್ ಬೆಂಕಿ ಹಚ್ಚಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಉರುಳು ಸೇವೆ ನಡೆಸಿದ್ರು. ಬಿಜೆಪಿ ಜೊತೆ ಕನ್ನಡಪರ ಹೋರಾಟಗಾರರು ನಗರವನ್ನ ಬಂದ್ ಮಾಡಿ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಸರ್ಕಾರಕ್ಕೆ ಎರಡು ದಿನಗಳ ಕಾಲ ಗಡುವು ನೀಡಿದ್ದು, ಸೋಮವಾರದ ಹೊತ್ತಿಗೆ ನೀರನ್ನ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ. ಇಲ್ಲವಾದ್ರೆ, ಯಗಚಿ ಡ್ಯಾಂ ಎದುರು ಅಹೋ ರಾತ್ರಿ ಧರಣಿ ನಡೆಸೋದಾಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಒಟ್ಟಾರೆಯಾಗಿ ಡ್ಯಾಂ ಇರೋದು ಹಾಸನ ಜಿಲ್ಲೆಯಲ್ಲಿ. ಅದಕ್ಕೆ ಬರೋ ನೀರು ಕಾಫಿನಾಡಿನದ್ದು. ಚಿಕ್ಕಮಗಳೂರಿನ ಗಿರಿಭಾಗದಲ್ಲಿ ಸುರಿಯೋ ಮಳೆಯೇ ಯಗಚಿ ಡ್ಯಾಂನ ನೀರಿನ ಮೂಲ. ಅವ್ರು ಡ್ಯಾಂ ನಮ್ದು ಅಂದ್ರೆ, ಇವ್ರು ನೀರ್ ನಮ್ದು ಅಂತಿದ್ದಾರೆ. ರಾತ್ರೋರಾತ್ರಿಯ ಸರ್ಕಾರದ ನಡೆಯೂ ಕಾಫಿನಾಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕುಡಿಯೋ ನೀರಿಗಾಗಿ ಜನ ಬೀದಿಗಿಳಿದಿದ್ದಾರೆ. ಸರ್ಕಾರ ಮುಂದೇನ್ ಮಾಡುತ್ತೋ ಕಾದು ನೋಡ್ಬೇಕು.