ಬನ್ನೂರು: ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೂರಿಗೆ ಸಮೀಪದ ಕೇತುಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇತುಪುರ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜು ಬಂಧಿತರು. ಇವರು 2010-11 ಹಾಗೂ 2011-12ನೇ ಸಾಲಿನಲ್ಲಿ ಸಂಘದ ಹಣ, ರೈತರ ಹಣ ಹಾಗೂ ದಾಸ್ತಾನು ಕೊರತೆ ಉಂಟು ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಂಘಕ್ಕೆ ಮೋಸ, ವಂಚನೆ, ನಂಬಿಕೆ ದ್ರೋಹ, ಸಂಘದಲ್ಲಿ ಪೋರ್ಜರಿ ವ್ಯವಹಾರ ನಡೆಸಿರುವುದು ಕಂಡು ಬಂದಿತ್ತು. ಜೊತೆಗೆ ರೈತರ ಹೆಸರಿನಲ್ಲಿ ಸಾಲ ಪಡೆದು ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ನಾಗರಾಜುರನ್ನು ಸಂಘದಿಂದ ಅಮಾನತ್ತು ಮಾಡಿ, ವಿಚಾರಣೆ ನಡೆಸಿ ಇವರ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು ಸಾಭೀತಾದ್ದರಿಂದ ನಾಗರಾಜುರನ್ನು ಸೇವೆಯಿಂದ ವಜಾಗೊಳಿಸಿ ಆಡಳಿತ ಮಂಡಳಿಯವರು ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇವರ ಅವಧಿಯಲ್ಲಿ ಲೆಕ್ಕ ಪರಿಶೋಧಕರು ಲೆಕ್ಕ ಪರಿಶೋಧನೆ ನಡೆಸಿ 33,99,727.51ರೂ ದುರುಪಯೋಗ ಆಗಿರುವುದು ಕಂಡುಬಂದಿದ್ದು, ಇದರಿಂದ ಅನ್ಯಾಯವನ್ನು ಸರಿಪಡಿಸುವಂತೆ ಪೊಲೀಸರಿಗೆ ಲಿಖಿತ ದೂರು ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೂರು ಪೊಲೀಸರು ಇದೀಗ ನಾಗರಾಜು ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.