ಕಡೂರು: ಪಟ್ಟಣದ ಅಂಬೇಡ್ಕರ್ ನಗರವು ಸರ್ಕಾರದ ಅಧಿಕೃತ ಕೊಳಗೇರಿ ಪಟ್ಟಿಯಲ್ಲಿದೆ. ಇಲ್ಲಿನ ನಿವಾಸಿಗಳಿಗೆ ಶೀಘ್ರದಲ್ಲಿಯೇ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅಂಬೇಡ್ಕರ್ ನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ರೂ. 30 ಲಕ್ಷ ವೆಚ್ಚದ ಒಳಚರಂಡಿ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಂಬೇಡ್ಕರ್ ನಗರದಲ್ಲಿ ಈಗಾಗಲೇ ಇರುವ ಮನೆಗಳು ಶಿಥಿಲವಾಗಿದ್ದು. ಅನೇಕ ನಿವಾಸಿಗಳು ಹಕ್ಕುಪತ್ರ ಇಲ್ಲದೆ ಪರದಾಡುತ್ತಿದ್ದಾರೆ. ಬಹಳ ವರ್ಷಗಳಿಂದ ಇವರ ಸಮಸ್ಯೆ ಈಗೆಯೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಕೆಲವೇ ದಿನಗಳಲ್ಲಿ ದೊರೆಯಲಿದೆ ಎಂದು ಹೇಳಿದರು.
ಸದ್ಯದಲ್ಲಿಯೇ ಅಂಬೇಡ್ಕರ್ನಗರ ಮತ್ತು ಕುವೆಂಪುನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುವುದು. ಈ ನಿಟ್ಟಿನಲ್ಲಿ ತಾವು ರಾಜ್ಯ ಸರ್ಕಾರ, ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ದೇವರಾಜ್ ಹಾಗೂ ವಸತಿ ಸಚಿವ ಎಂ. ಕೃಷ್ಣಪ್ಪ ಅವರಿಗೆ ವೈಯಕ್ತಿಕ ಕೃತಜ್ಞತೆ ಸಲ್ಲಿಸುತ್ತೇನೆ. ಪಟ್ಟಣದ ಸಮಗ್ರ ಅಭಿವೃದ್ದಿ ದೃಷ್ಟಿಯಲ್ಲಿ ತಾವು ಕೆಲಸ ಮಾಡುತ್ತಿದ್ದು. ಕೊಳಚೆ ನಿರ್ಮೂಲನಾ ಮಂಡಳಿಯಿಂದ ರೂ. 30 ಲಕ್ಷ ದೊಡ್ಡ ಮೊತ್ತದ ಹಣ ಇದೇ ಮೊದಲ ಬಾರಿಗೆ ಬಂದಿದೆ. ಇದರಲ್ಲಿ ಅಂಬೇಡ್ಕರ್ ನಗರದ ಎಲ್ಲಾ ಬೀದಿಗಳಿಗೆ ಕಾಂಕ್ರೀಟ್ ರಸ್ತೆಗಳಾಗಲಿದ್ದು, ಒಳಚರಂಡಿ ವ್ಯವಸ್ಥೆ ಕೂಡ ಆಗಲಿದೆ. ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಈ ಅಭಿವೃದ್ದಿ ಅನಿವಾರ್ಯ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಕಳೆದ 4 ವರ್ಷದಿಂದ ಈ ಅಂಬೇಡ್ಕರ್ನಗರದ ವಾರ್ಡ್ನಲ್ಲಿ ಏನು ಅಭಿವೃದ್ದಿಯಾಗಿದೆ ಎಂಬ ಬಗ್ಗೆ ತಾವು ಪ್ರಶ್ನಿಸುವುದಿಲ್ಲ. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.