ಗುಂಡ್ಲುಪೇಟೆ: ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬರು ನೇಣಿಗೆ ಶರಣಾಗಿದ್ದು, ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿದೆ. ಮೂಲತಃ ತಾಲೂಕಿನ ಕಬ್ಬಹಳ್ಳಿ ಗ್ರಾಮದ ನಿವಾಸಿ ಪೇದೆ ಪ್ರಸಾದ್ (31) ನೇಣಿಗೆ ಶರಣಾದ ದುರ್ದೈವಿ.
ಬೇಗೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಪ್ರಸಾದ್ ಸೋಮವಾರ ಬೆಳಗ್ಗೆ ಯಾವುದೇ ದೂರವಾಣಿ ಕರೆಗಳನ್ನು ಸ್ವೀಕರಿಸದ ಕಾರಣ ಅನುಮಾನಗೊಂಡ ಕುಟುಂಬದವರು ಸಹೋದ್ಯೋಗಿಗಳಿಗೆ ಕರೆಮಾಡಿ ವಿಷಯ ತಿಳಿಸಿದ್ದು, ಬಳಿಕ ಸಿಬ್ಬಂದಿ ಪ್ರಸಾದ್ ಕೊಠಡಿಯ ಬಳಿ ಬಂದು ಬಾಗಿಲು ಬಡಿದರೂ ತೆರೆಯದ ಕಾರಣದಿಂದ ಅನುಮಾನಗೊಂಡು ವಸತಿ ಗೃಹದ ಬಾಗಿಲನ್ನು ಒಡೆದು ನೋಡಿದಾಗ ಕೊಠಡಿಯಲ್ಲಿ ಫ್ಯಾನ್ ಗೆ ಬೆಡ್ ಶಿಟ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹ ಕಂಡುಬಂತು. ಕೂಡಲೇ ಪೊಲೀಸ್ ಸಿಬ್ಬಂದಿ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
2008ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಯಳಂದೂರು ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ಇತ್ತೀಚೆಗೆ ಬೇಗೂರು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 3 ತಿಂಗಳಿನಿಂದ ಬೇಗೂರು ಠಾಣೆಯಲ್ಲಿ ವಿಶೇಷ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು ಒಂದು ಹೆಣ್ಣು ಮಗು ಸಹ ಇದೆ.
ರಸ್ತೆಯಲ್ಲಿಯೇ ಅಳುತ್ತಾ ಸಾಗಿದ್ದ ಪ್ರಸಾದ್ : ಭಾನುವಾರ ಸಂಜೆವರೆಗೂ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಿದ್ದ ಆದರೆ ರಾತ್ರಿ ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದ ಎನ್ನಲಾಗಿದ್ದು, ಬೆಳಿಗ್ಗೆ 6 ಘಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮುಂಭಾಗದಿಂದ ಪೊಲೀಸ್ ವಸತಿ ಗೃಹದವರೆಗೂ ಅಳುತ್ತಾ ಸಾಗಿದ್ದನ್ನು ಸ್ಥಳಿಯರು ಕಂಡಿದ್ದಾರೆ. ಮೃತ ಪೇದೆ ಅಳುತ್ತಿರುವುದನ್ನು ವಸತಿಗೃಹದಲ್ಲಿದ್ದ ಮತ್ತೊಬ್ಬ ಪೊಲೀಸ್ ಪೇದೆಯ ಪತ್ನಿ ಕಂಡು ಪೊಲೀಸ್ ಸಹೋದ್ಯೋಗಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದು ಕೊಠಡಿಗೆ ತೆರಳುವಷ್ಟರಲ್ಲಿ ಈ ದುರ್ಘಟನೆ ನಡೆದು ಹೋಗಿದೆ ಎನ್ನಲಾಗಿದೆ.
ಕಬ್ಬಹಳ್ಳಿ ಗ್ರಾಮಸ್ಥರು ಕಬ್ಬಹಳ್ಳಿ ಜಿ.ಪಂ ಸದಸ್ಯ ಕೆ.ಎಸ್.ಮಹೇಶ್ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ಪೊಲೀಸ್ ವಸತಿ ಗೃಹದ ಬಳಿ ಸಮಾವೇಶಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಘಟನೆ ನಡೆದು 4 ಗಂಟೆಗಳಾದರೂ ಸ್ಥಳಕ್ಕೆ ಬಾರದ ಕಾರಣದಿಂದ ಆಕ್ರೋಶಗೊಂಡು ಕೆಲಕಾಲ ಹೆದ್ದಾರಿ ತಡೆ ನಡೆಸಿದರು. ಪೇದೆಯ ಸಾವಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳವೇ ಕಾರಣವಾಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ತಿಳಿಯುವಂತೆ ಮಾಡಬೇಕು. ಆತನ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪರಿಣಾಮವಾಗಿ ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿತ್ತು.
ನಂತರ ಪೊಲೀಸ್ ಠಾಣೆಯ ಆವರಣದಲ್ಲಿ ಶವವನ್ನಿಟ್ಟು ಪ್ರತಿಭಟನೆ ನಡೆಸಲಾಯಿತು. ನಂತರ ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ವೃತ್ತನಿರೀಕ್ಷಕ ಕೆ.ವಿ.ಕೃಷ್ಣಪ್ಪ, ಪಿ,ಎಸ್ಐ ಬಿ.ಎನ್. ಸಂದೀಪ್ ಕುಮಾರ್, ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ಪ್ರತಿಭಾಟನಾಕಾರರ ಮನವೊಲಿಸಿ ತಡೆ ತೆರವುಗೊಳಿಸಿದರು.
ಸ್ಥಳಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಕುಲದೀಪ್ ಕುಮಾರ್ ಜೈನ್, ಡಿ,ವೈ,ಎಸ್,ಪಿ ಎಸ್.ಇ. ಗಂಗಾಧರಸ್ವಾಮಿ ಆಗಮಿಸಿ ಸರ್ಕಾರದ ನಿಯಮದಂತೆ ಮೃತರ ಕುಟುಂಬಕ್ಕೆ 20ಲಕ್ಷ ರೂ ಪರಿಹಾರ ಮತ್ತು ಪತ್ನಿಗೆ ಉದ್ಯೋಗ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದ ನಂತರ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಬೇಗೂರು ಪೋಲೀಸ್ ಸಿಬ್ಬಂದಿ ಪ್ರಸಾದ್ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೋ ಅಥವಾ ಯಾರಾದರೂ ಮಾನಸಿಕವಾಗಿ ಹಿಂಸೆಯಿಂದ ಈ ರೀತಿ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಕಳೆದ ಸೋಮವಾರ ಕಸಾಯಿಖಾನೆಗೆ ಸಾಗಿಸುತ್ತಿದ್ದ 7 ಕರುಗಳನ್ನು ಪ್ರಸಾದ್ ಆಟೋ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಾಗಲು ಕಾರಣರಾಗಿದ್ದರು. ಈ ಸಂದರ್ಭದಲ್ಲಿ ಕಸಾಯಿಖಾನೆಗೆ ಜಾನುವಾರು ಸಾಗಾಟದ ದಂಧೆಯಲ್ಲಿ ತೊಡಗಿರುವ ಕೆಲವರು ಪ್ರಸಾದ್ ಗೆ ದೂರವಾಣಿ ಮೂಲಕ ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಜೂಜಾಟದಲ್ಲಿ ತೊಡಗಿದ್ದರವರನ್ನು ಬಂಧಿಸಲು ಹೋಗಿ ಗಲಾಟೆ ನಡೆದಿತ್ತು ಎನ್ನಲಾಗಿದ್ದು ಈ ಸಂಬಂಧವಾಗಿ ಕೆಲವರಿಂದ ಬೆದರಿಕೆ ಇತ್ತು ಎಂದು ಮಾತನಾಡಿಕೊಳ್ಳುತ್ತಿದ್ದು ನೆರೆದಿದ್ದ ಸಾರ್ವಜನಿಕರಿಂದ ಹಾಗೂ ಕುಟುಂಬದ ಹಲವರಿಂದ ಕೇಳಿಬಂತು.