ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿದಾಳಿಗೆ ಮರಿಯಾನೆಯೊಂದು ಬಲಿಯಾಗಿರುವ ಘಟನೆ ನಡೆದಿದೆ.
ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ಬಳಿ ಸುಮಾರು 1 ವರ್ಷ 2 ತಿಂಗಳ ಆನೆಯ ಗಂಡು ಮರಿ ಹುಲಿ ದಾಳಿಗೆ ಬಲಿಯಾಗಿದೆ. ಗಸ್ತು ನಡೆಸುತ್ತಿದ್ದ ಅರಣ್ಯ ಸಿಬ್ಬಂದಿಗೆ ಆನೆ ಮರಿಯ ಕಳೇಬರ ಪತ್ತೆಯಾಗಿದ್ದು, ಹತ್ತಿರ ಹೋಗಿ ನೋಡಿದಾಗ ಹುಲಿ ದಾಳಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಕೂಡಲೇ ಅವರು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪಶು ವೈದ್ಯರೊಂದಿಗೆ ಸ್ಥಳಕ್ಕೆ ತೆರಳಿದ ವಲಯಾರಣ್ಯಾಧಿಕಾರಿ ಶಿವಾನಂದ ಮಗ್ದುಂ, ಡಿಆರ್ಎಫ್ಓ ಶಬ್ಬೀರ್, ಗಾರ್ಡ್ ನವೀನ್ ಹಾಗೂ ಇತರರು ಭೇಟಿ ಮಾಡಿ ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಸಂಸ್ಕಾರ ಮಾಡಿದರು. ಆನೆಯ ಕುತ್ತಿಗೆಯ ಭಾಗದಲ್ಲಿ ಹುಲಿಯು ಕಚ್ಚಿ ಮಾಂಸವನ್ನು ಕಿತ್ತು ತಿಂದಿರುವ ಗುರುತುಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.