ಮೂಡಿಗೆರೆ: ತತ್ಕೊಳ ಮೀಸಲು ಅರಣ್ಯಭಾಗದಲ್ಲಿ ಕಳೆದ ಒಂದು ವಾರದಿಂದ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದು, ಸಾವಿರಾರು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ.
ಮೂಡಿಗೆರೆ ಮತ್ತು ಆಲ್ದೂರು ಅರಣ್ಯವ್ಯಾಪ್ತಿಯ ತತ್ಕೊಳ ಮೀಸಲು ಅರಣ್ಯ ಸುಮಾರು 25 ಸಾವಿರ ಎಕರೆಗೂ ಅಧಿಕ ಪ್ರದೇಶವನ್ನು ಒಳಗೊಂಡಿದ್ದು. ಈ ಅರಣ್ಯ ಭಾಗದಲ್ಲಿ ಈಗಾಗಲೇ ಸಾಕಷ್ಟು ಪ್ರದೇಶವನ್ನು ಬೆಂಕಿ ಆಕ್ರಮಿಸಿಕೊಂಡಿದೆ. ಬಾಳೆಹಳ್ಳಿ, ಕುಂಡ್ರ, ಬೆಳಗೋಡು ಕೆಂಜಿಗೆ, ಸಾರಗೋಡು, ಮುತ್ತೋಡಿ, ತತ್ಕೊಳ, ಹುಲ್ಲೇಮನೆ ಕುಂದೂರು, ಭೈರಿಗದ್ದೆ, ಕೋಣನಬಸರಿ ಎಸ್ಟೇಟ್ ಚಿಕ್ಕಹಳ್ಳದ ಮೂಲಕ ಆಲ್ದೂರು ವಲಯದವರೆಗೆ ಬೆಂಕಿ ಕಾಣಿಸಿಕೊಂಡಿದ್ದು, ದಿನೇ ದಿನೇ ಬೆಂಕಿ ವ್ಯಾಪಿಸತೊಡಗಿದೆ. ತತ್ಕೊಳ ಮೀಸಲು ಅರಣ್ಯದಲ್ಲಿ ಬೆಲೆಬಾಳುವ ಮರಗಳಿದ್ದು ಬೆಂಕಿಯ ಕೆನ್ನಾಲಿಗೆಗೆ ಮರಗಳೆಲ್ಲವೂ ಸುಟ್ಟುಹೋಗುತ್ತಿವೆ. ಕಾಡುಪ್ರಾಣಿಗಳು ಪಕ್ಷಿಸಂಕುಲ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗತೊಡಗಿವೆ.
ಅರಣ್ಯದಂಚಿನ ಪ್ರದೇಶಕ್ಕೆ ಬೆಂಕಿ ವ್ಯಾಪಿಸುತ್ತಿದ್ದು, ಹಲವು ಗ್ರಾಮಗಳಲ್ಲಿ ಕಾಳಿಂಗ ಸರ್ಪ ಸೇರಿದಂತೆ ಸಣ್ಣಪುಟ್ಟ ಸಸ್ತನಿ, ಪ್ರಾಣಿಗಳು ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯಯ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಬೆಂಕಿಯನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮೀಸಲು ಅರಣ್ಯ ಭಾಗ ಸಂಪೂರ್ಣ ಸುಟ್ಟು ಹೋಗುವ ಅಪಾಯವಿದೆ.