ಗುಂಡ್ಲುಪೇಟೆ: ಕರ್ನಾಟಕದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಕೇರಳದ ಯುವತಿಯನ್ನು ಕರೆದುಕೊಂಡು ಬಂದ ವ್ಯಕ್ತಿಯೊಬ್ಬ ಲಾಡ್ಜ್ ನಲ್ಲಿ ಕೊಠಡಿ ಪಡೆದು ಅಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಕಲ್ಪೆಟ್ಟಾದ ಪುತ್ತೂರು ವೈಯಾಲ್ ನಿವಾಸಿಯಾದ ಅಪ್ಸಲ್ ಅಲಿಯಾಸ್ ಅರುಣ್ (30) ಎಂಬಾತನೇ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾದವನು.
ಈತ ಕ್ಯಾಲಿಕೇಟ್ ಪಟ್ಟಣದ ಚೆವಾಯುರ್ನ ನಿವಾಸಿಯಾದ 19 ವರ್ಷದ ಯುವತಿಯನ್ನು ಪರಿಚಯಿಸಿಕೊಂಡು ಆಕೆಗೆ ಕರ್ನಾಟಕದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದನು. ಆತನ ಮಾತನ್ನು ನಂಬಿ ಆಕೆಯೂ ಅವನೊಂದಿಗೆ ಬಂದಿದ್ದಾಳೆ. ಕೇರಳದಿಂದ ಗುಂಡ್ಲುಪೇಟೆಗೆ ಬಂದ ಅಪ್ಸಲ್ ಪಟ್ಟಣದಲ್ಲಿರುವ ಆಶೀರ್ವಾದ್ ಎಂಬ ಲಾಡ್ಜ್ ಗೆ ತೆರಳಿ ರೂಂ ಪಡೆದು ಆ ರೂಂನಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆತನಿಂದ ತಪ್ಪಿಸಿಕೊಂಡ ಆಕೆ ತನ್ನೂರಿಗೆ ತೆರಳಿ ಕೇರಳದ ಚೆರಿಯೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ ಅಲ್ಲಿನ ಪೊಲೀಸರು ಕೃತ್ಯ ಎಸಗಿದ ಗುಂಡ್ಲುಪೇಟೆ ಪಟ್ಟಣದ ಲಾಡ್ಜ್ ಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಚೆರಿಯೂರು ಪಿಎಸ್ಐ ಕೆ.ಕೆ.ಬಿಜುರವರು ಪಟ್ಟಣಕ್ಕೆ ಆಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ.