ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ತಂದೆ, ತಾಯಿ, ಸಹೋದರ ಮತ್ತು ಸಹೋದರಿಯನ್ನು ಪಿರ್ಯಾದಿದಾರರನ್ನಾಗಿ ಪರಿಗಣಿಸಬೇಕೆಂದು ನಗರದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್) ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಾದ ಮಂಡನೆಯಾಗಿದೆ. ಈ ಸಂಬಂಧದ ಆದೇಶವನ್ನು ಏ.3ಕ್ಕೆ ಕಾಯ್ದಿರಿಸಲಾಗಿದೆ.
ಡಿವೈಎಸ್ಪಿ ಗಣಪತಿ ಅವರ ತಂದೆ ಕುಶಾಲಪ್ಪ, ತಾಯಿ ಪೊನ್ನಮ್ಮ, ಸಹೋದರ ಮಾಚಯ್ಯ ಮತ್ತು ಸಹೋದರಿ ಸಬಿತಾ ಅವರ ಪರವಾಗಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಹೆಚ್. ಪವನ್ ಚಂದ್ರ ಶೆಟ್ಟಿ ಅವರು ಅಗತ್ಯ ದಾಖಲೆಗಳ ಸಹಿತ ತಮ್ಮ ವಾದವನ್ನು ಮಂಡಿಸಿದರು. ಇದನ್ನು ಆಲಿಸಿದ ನ್ಯಾಯಾಧೀಶರಾದ ಅನ್ನಪೂಣೇಶ್ವರಿ ಅವರು, ಈ ಸಂಬಂಧದ ತಮ್ಮ ಆದೇಶ ನೀಡಲು ಮುಂದಿನ ಏ.3 ನ್ನು ನಿಗದಿಪಡಿಸಿದರು.
ವಾದಮಂಡನೆಗೆ ಸಂಬಂಧಿಸಿದಂತೆ ವಕೀಲ ಪವನ್ ಚಂದ್ರ ಶೆಟ್ಟಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಸಾಲಿನ ಜು.7 ರಂದು ಡಿವೈಎಸ್ಪಿ ಗಣಪತಿ ಅವರು ಕೆಲವರ ವಿರುದ್ಧ ಆರೋಪಗಳನ್ನು ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ನ್ಯಾಯಾಲಯದ ಸೂಚನೆ ಮೇರೆ ಪ್ರಕರಣ ದಾಖಲಾಗುವುದರೊಂದಿಗೆ, ಸಿಐಡಿ ತನಿಖೆಯೂ ನಡೆದಿತ್ತು.
ತನಿಖೆ ನಡೆಸಿದ ಸಿಐಡಿ ‘ಬಿ’ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಸಂದರ್ಭ ಡಿವೈಎಸ್ಪಿ ಗಣಪತಿ ಅವರ ಪುತ್ರ ನೇಹಾಲ್ ಗಣಪತಿ ಅವರು, ತಮ್ಮ ಶಿಕ್ಷಣಕ್ಕೆ ತೊಂದರೆಯಾಗುವ ವಿಚಾರವನ್ನು ತಿಳಿಸಿ ಪ್ರಕರಣದಿಂದ ಹಿಂದಕ್ಕೆ ಸರಿದಿದ್ದರು. ಆದರೆ ಪ್ರಕರಣದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಡಿವೈಎಸ್ಪಿ ಗಣಪತಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದನ್ನು ಅವರು ಉಲ್ಲೇಖಿಸಿದರು.
ಸುಪ್ರಿಂ ಅಂಗಳದಲ್ಲಿದೆ ಪ್ರಕರಣ: ಇದರೊಂದಿಗೆ ಡಿವೈಎಸ್ಪಿ ಗಣಪತಿ ಅವರ ತಂದೆ ಕುಶಾಲಪ್ಪ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು, ಒಟ್ಟು ಪ್ರಕರಣವನ್ನು ಸಿಬಿಐಗೆ ವಹಿಸಿ ಕೊಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಗಣಪತಿ ಅವರ ತಂದೆ, ತಾಯಿ, ಸಹೋದರ ಸಹೋದರಿ ಅವರಿಗೆ ಪ್ರಕರಣವನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೋರಿಕೊಳ್ಳುತ್ತಿರುವುದಾಗಿ ವಕೀಲ ಪವನ್ ಚಂದ್ರ ಶೆಟ್ಟಿ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯವು 2016ರ ದಾರಿವಾಲ್ ಇಂಡಸ್ಟ್ರೀಸ್ ಮತ್ತು ಕಿಶೋರ್ ವಾದ್ ವಾಲ್ ಪ್ರಕರಣದ ತೀರ್ಪಿನಲ್ಲಿ, ನೊಂದ ಮಂದಿಗೆ ಪ್ರಕರಣವನ್ನು ನಡೆಸಲು ಅವಕಾಶ ನೀಡಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. ಉಳ್ಳವರಿಂದ ಯಾವುದೇ ಕಾರಣಕ್ಕೂ ಸಾಮಾನ್ಯ ಜನರಿಗೆ ತೊಂದರೆ ಉಂಟಾಗದಂತೆ ಸಂವಿಧಾನದಲ್ಲಿ ಅವಕಾಶವನ್ನು ನೀಡಿದ್ದು, ಅದನ್ನು ನ್ಯಾಯಾಲಯ ಪರಿಗಣಿಸಿದೆ. ಇದೇ ಪ್ರಕಾರವಾಗಿ ಗಣಪತಿ ಅವರ ಪ್ರಕರಣವನ್ನು ಕೂಡ ಪರಿಗಣಿಸಬೇಕೆಂದು ನ್ಯಾಯಾಲಯದ ಮುಂದೆ ಮನವಿ ಮಾಡಿರುವುದಾಗಿ ವಕೀಲ ಪವನ್ ಚಂದ್ರ ಶೆಟ್ಟಿ ಹೇಳಿದರು.
ಪ್ರಕರಣದ ವಾದಮಂಡನೆಯ ಸಂದರ್ಭ ಡಿವೈಎಸ್ಪಿ ಗಣಪತಿ ಅವರ ತಂದೆ ಕುಶಾಲಪ್ಪ, ಸಹೋದರ ಮಾಚಯ್ಯ ಅವರುಗಳಿದ್ದರು. ಮಾಚಯ್ಯ ಅವರು ಮಾತನಾಡಿ, ಪ್ರಕರಣದಲ್ಲಿ ತಮ್ಮನ್ನು ಅರ್ಜಿದಾರರನ್ನಾಗಿ ನ್ಯಾಯಾಲಯ ಪರಿಗಣಿಸುವ ವಿಶ್ವಾಸ ವ್ಯಕ್ತಪಡಿಸಿದರು.