ಮೂಡಿಗೆರೆ: ಪಟ್ಟಣದಲ್ಲಿ ಕುಡಿಯುವ ನೀರು, ಸ್ಚಚ್ಚತೆ ನಿಭಾಯಿಸುವಲ್ಲಿ ಪ.ಪಂ. ಸಂಪೂರ್ಣವಾಗಿ ನಿಷ್ಕ್ರೀಯಗೊಂಡಿದೆ ಎಂದು ಸಚೇತನ ಯುವ ಸಂಘದ ನೂತನ ಅಧ್ಯಕ್ಷ ವಿಶ್ವಕುಮಾರ್ ಆರೋಪಿಸಿದರು.
ಸಚೇತನ ಯುವ ಸಂಘದಿಂದ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರನ್ನು ಬಾವಿ, ಹಳ್ಳಗಳಿಂದ ಪಟ್ಟಣದ ಜನತೆ ನೀರನ್ನು ಹೊತ್ತು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬರಗಾಲ ಎಂಬುವುದು ಅರಿವಿದ್ದರೂ ಸರಕಾರ ಟ್ಯಾಂಕರ್ ಮೂಲಕ ನೀರೊದಗಿಸುವಂತೆ ಸೂಚಿಸಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ಕೂತಿದ್ದಾರೆ. ಅಲ್ಲದೆ ಪಟ್ಟಣದ ಬಹುತೇಕ ಜನವಸತಿ ಪ್ರದೇಶ ಮತ್ತು ಚರಂಡಿಗಳಲ್ಲಿ ಕಸ ಮತ್ತು ಕೊಳಚೆ ನೀರು ತಿಂಗಳಾನುಗಟ್ಟಲೆ ನಿಂತು ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡು ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೂಗ ರುಜಿನಗಳು ಹರುಡುವ ಭೀತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಮುಖಂಡ ಬಿ.ಎಲ್.ಲೋಹಿತ್ ಮಾತನಾಡಿ, ಪಟ್ಟಣದ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಮುಖ್ಯಮಂತ್ರಿಯ ಹೆಸರು ಹೇಳಿ ಹೆಸಗಲ್ ರಸ್ತೆಗೆ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ಅಲ್ಲದೆ ಪಟ್ಟಣದ ಮೀನು ಮತ್ತು ಮಾಂಸ ಮಾರಾಟ ಮಳಿಗೆಗಳಿಗೆ ಪರವಾನಗಿ ಇಲ್ಲದೆ ಎಲ್ಲಾ ರಸ್ತೆಗಳಲ್ಲಿ ಮಾಂಸದ ಅಂಗಡಿ ನಿರ್ಮಾಣವಾಗುತ್ತಿದೆ. ಇದಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಅಂಗಡಿ ಮಾಲೀಕರೊಂದಿಗೆ ನೇರ ಶಾಮೀಲಾಗಿದ್ದಾರೆ. ಮಾಂಸ ಮಾರಾಟ ಮಳಿಗೆ ನಿರ್ಮಾಣಗೊಂಡು, ಉದ್ಘಾಟನೆ ಮಾಡಿದ್ದರೂ ಇಲ್ಲಿಯವರೆಗೂ ಟೆಂಡರ್ ಪ್ರಕ್ರಿಯೆ ಏಕೆ ನಡೆದಿಲ್ಲ ಎಂದು ಪ್ರಶ್ನಿಸಿದರು. ಶೀಘ್ರದಲ್ಲಿಯೆ ಮಾಂಸ ಮಾರಾಟದ ಅಂಗಡಿಗಳನ್ನು ತೆರವುಗೊಳಿಸಿ ಒಂದೇ ಕಡೆ ಮಾರುಕಟ್ಟೆಯಲ್ಲಿ ಅನುವು ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.