ಗುಂಡ್ಲುಪೇಟೆ: ತನ್ನ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೇಗೂರು ಠಾಣೆಯ ಪೇದೆ ಪ್ರಸಾದ್ ನಿವಾಸಕ್ಕೆ ಆಹಾರ ಹಾಗೂ ಮಾಗರೀಕ ಸರಬರಾಜು ಖಾತೆಯ ಸಚಿವ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ತಾಲೂಕಿನ ಕಬ್ಬಹಳ್ಳಿ ಗ್ರಾಮದವರಾದ ಪೇದೆ ಪ್ರಸಾದ್ ಮಾ.6ರಂದು ಬೇಗೂರಿನ ಪೊಲೀಸ್ ವಸತಿಗೃಹದಲ್ಲಿ ನೇಣುಹಾಕಿಕೊಂಡು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಪೇದೆಯು ಆತ್ಮಹತ್ಯೆ ಮಾಡಿಕೊಂಡ ವಸತಿಗೃಹ ಹಾಗೂ ಸ್ವಗ್ರಾಮವಾದ ಕಬ್ಬಹಳ್ಳಿಯ ನಿವಾಸಕ್ಕೆ ಭೇಟಿ ನೀಡಿದ್ದರು. ಮೃತ ಪೇದೆ ಪ್ರಸಾದ್ ಸಹೋದರ ಹುಲ್ಲಹಳ್ಳಿಯ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎಸ್.ನಾಗು, ತಾಯಿ ರೇವಮ್ಮ, ತಂದೆ ಸಿದ್ದೂರಪ್ಪ, ಪತ್ನಿ ವಿದ್ಯಾ ಮಗಳು ವಿಂದ್ಯಾ ಹಾಗೂ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಮನೆಗೆ ಆಧಾರವಾಗಿದ್ದ ಮಗನ ಸಾವಿನಿಂದ ಕುಟುಂಬವು ದಿಕ್ಕೆಟ್ಟಿದ್ದು ಶೀಘ್ರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಮನವಿಯನ್ನು ಆಲಿಸಿದ ಸಚಿವ ಖಾದರ್ ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಕೆ.ಎಸ್.ಮಹೇಶ್, ಕೆರೆಹಳ್ಳಿ ನವೀನ, ಮಾಜಿ ಸದಸ್ಯ ಮುನಿರಾಜು ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿಕೃಷ್ಣಪ್ಪ ಇದ್ದರು