ಮಡಿಕೇರಿ: ರಾಜ್ಯ ವಕ್ಫ್ ಮಂಡಳಿ ಅನುಮೋದಿಸಿರುವ ಮಡಿಕೇರಿ ಜಾಮೀಯಾ ಮಸೀದಿಯ ಬೈಲಾವನ್ನು ರದ್ದುಗೊಳಿಸಬೇಕು ಮತ್ತು ಮಹಾಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿ ಮಸೀದಿಗೆ ಸಂಬಂಧಿಸಿದ ಸಾರ್ವಜನಿಕ ಆಡಳಿತ ಮಂಡಳಿ ಪ್ರಮುಖರು ನಗರದಲ್ಲಿರುವ ಜಿಲ್ಲಾ ವಕ್ಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಕ್ಫ್ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮಸೀದಿ ಮತ್ತು ಶವಸಂಸ್ಕಾರದ ಪ್ರದೇಶ ಏಕ ವ್ಯಕ್ತಿಯದಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರ ಈ ಹಿಂದೆ ರಚಿಸಿದ ಬೈಲಾದ ಪ್ರಕಾರವೇ ಮಸೀದಿ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಬೇಕು. ಆದರೆ ಹಣ ಮತ್ತು ರಾಜಕೀಯ ಪ್ರಭಾವಕ್ಕೆ ಮಣಿದಿರುವ ವಕ್ಫ್ ಮಂಡಳಿ ಪ್ರತ್ಯೇಕ ಬೈಲಾ ರಚಿಸುವ ಮೂಲಕ ವ್ಯಕ್ತಿಯೊಬ್ಬರ ಸ್ವಾರ್ಥ ಸಾಧನೆಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲಯದ ಆದೇಶವಿದ್ದರೂ ಮಹಾಸಭೆಯನ್ನು ಕರೆಯದೆ ನಿರ್ಲಕ್ಷ್ಯ ತೋರಲಾಗಿದೆ. ಶವಸಂಸ್ಕಾರಕ್ಕೂ ಅನುಮತಿಯ ಅಗತ್ಯವಿದೆ ಎಂದು ದಬ್ಬಾಳಿಕೆ ಮಾಡಲಾಗುತ್ತಿದ್ದು, ದಾನಿಗಳು ದಾನವಾಗಿ ನೀಡಿದ ಮಸೀದಿ ಜಾಗವನ್ನು ತಮ್ಮದೆಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ಖಾತೆ ಬದಲಾವಣೆಗೂ ನಗರಸಭೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಪ್ರಮುಖರು ಆರೋಪಿಸಿದರು.
ಜಾಮೀಯಾ ಮಸೀದಿ ಆಸ್ತಿ ಸಾರ್ವಜನಿಕವಾಗಿ ಸರ್ವ ಮುಸಲ್ಮಾನರ ಆಸ್ತಿಯಾಗಿದ್ದು, ಸ್ವಾರ್ಥ ಸಾಧನೆಯ ಯಾವುದೋ ಒಬ್ಬ ವ್ಯಕ್ತಿಯ ಆಸ್ತಿಯಾಗಲು ಸಾಧ್ಯವಿಲ್ಲ ಮತ್ತು ಏಕವ್ಯಕ್ತಿ ಧೋರಣೆಗೂ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ನೂತನ ಬೈಲಾವನ್ನು ರಚಿಸಲಾಗಿದೆ. ಈ ಎಲ್ಲಾ ಗೊಂದಲಗಳಿಗೆ ರಾಜ್ಯ ವಕ್ಫ್ ಮಂಡಳಿ ಕಾರಣವೆಂದು ಟೀಕಿಸಿದ ಪ್ರಮುಖರು ನೂತನ ಬೈಲಾವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಮಂಡಳಿಯ ರಾಜ್ಯ ಘಟಕಕ್ಕೆ ತಕ್ಷಣ ದೂರನ್ನು ರವಾನಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನಂತರ ನಗರಸಭೆಗೆ ತೆರಳಿದ ಪ್ರಮುಖರು ಪೌರಾಯುಕ್ತರಾದ ಬಿ.ಶುಭ ಅವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಜಾಮೀಯಾ ಮಸೀದಿಯ ಆಸ್ತಿಯ ಖಾತೆಯನ್ನು ಬದಲಾಯಿಸಬಾರದು ಎಂದು ಮನವಿ ಮಾಡಿದರು.
ಮಸೀದಿಯ ಸಾರ್ವಜನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ನಜೀರ್ ಸಾಬ್, ಉಪಾಧ್ಯಕ್ಷರುಗಳಾದ ಹಾಜಿ ಶಫಿ, ಷರೀಪ್, ಪ್ರಮುಖರಾದ ಇಮ್ರಾನ್, ಆಯುಬ್, ಕೌಸರ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.