ಚಾಮರಾಜನಗರ: ತಮಿಳುನಾಡಿನ ಉಚಿತ ಪಡಿತರ ಅಕ್ಕಿ ಜಿಲ್ಲೆಯ ಕೊಳ್ಳೇಗಾಲದ ಹನೂರು ಸೇರಿದಂತೆ ಹಲವೆಡೆ ಮಾರಾಟವಾಗುತ್ತಿರುವುದು ಕಂಡು ಬರುತ್ತಿದೆ. ತಮಿಳುನಾಡು ಸರ್ಕಾರ ಬಡಕುಟುಂಬಗಳಿಗೆ ಉಚಿತ ಅಕ್ಕಿಯನ್ನು ವಿತರಿಸುತ್ತಿದ್ದು, ಅದನ್ನು ಖರೀದಿಸಿ ಕೆಲವರು ಚಾಮರಾಜನಗರ ಜಿಲ್ಲೆಯಲ್ಲಿ ತಂದು ಮಾರಾಟ ಮಾಡುತ್ತಿದ್ದು, ಸ್ಥಳೀಯರು ಅದನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ.
ಹಾಗೆ ನೋಡಿದರೆ ತಮಿಳುನಾಡು ಸರ್ಕಾರ ನೀಡಿದ ಹಲವು ಸೌಲಭ್ಯಗಳು ಕರ್ನಾಟಕದಲ್ಲಿ ಬಿಕರಿಯಾಗುತ್ತಿರುವುದು ಹೊಸತೇನಲ್ಲ. ಈ ಹಿಂದೆ ಅಲ್ಲಿನ ಕುಟುಂಬಗಳಿಗೆ ನೀಡಿದ್ದ ಗೃಹೋಪಯೋಗಿ ವಸ್ತುಗಳಾದ ಟಿವಿ, ಫ್ಯಾನ್, ಮಿಕ್ಸಿ ಹಾಗೂ ಗ್ರೈಂಡರ್ ಗಳನ್ನು ತಂದು ಮಾರಾಟ ಮಾಡಿದ್ದರು. ತಮಿಳುನಾಡಿನ ಗಡಿಯಂಚಿನ ಕೊಳತ್ತೂರು, ಮೇಟೂರು, ಕಾವೇರಿಪುರಂ, ಭವಾನಿಸಾಗರ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳ ಕುಟುಂಬಗಳಿಂದ ದಲ್ಲಾಳಿಗಳು ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ತಂದು ಮನೆಮನೆಗೆ ತೆರಳಿ ಮಾರಾಟದ ಭರಾಟೆ ಜೋರಾಗಿ ನಡೆಯುತ್ತಿದೆ.
ಈಗಾಗಲೇ ಹನೂರು ಭಾಗದ ಮಾರ್ಟಳ್ಳಿ, ರಾಮಾಪುರ, ಲೊಕ್ಕನಹಳ್ಳಿ, ಹನೂರು, ಮಂಗಲ, ಕಾಮಗೆರೆ, ಶಾಗ್ಯ, ಕೊಳ್ಳೇಗಾಲ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಒಂದು ಕೆಜಿ ಅಕ್ಕಿಗೆ 20-25ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲಿಂದ ಅಕ್ಕಿಯನ್ನು ವಾಹನಗಳಲ್ಲಿ ತರುತ್ತಿದ್ದರೂ ಗೇಟ್ ನಲ್ಲಿ ತಪಾಸಣೆ ನಡೆಸುವ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದೆ ರಾಜ್ಯದೊಳಗೆ ಬಿಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.