ಚಾಮರಾಜನಗರ: ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿನೊಬ್ಬ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಂತೂರು ಸರ್ಕಲ್ ಬಳಿಯ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪನಿಯೂರು ಮೂಲದ ನಿವಾಸಿ, ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದ ಶೇಖರ್(35) ಕಾಲು ಜಾರಿ ಬಿದ್ದು ಮೃತಪಟ್ಟ ದುರ್ದೈವಿ.
ಈತ ಕಳೆದ ಹತ್ತು ವರ್ಷಗಳಿಂದ ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಫ್ಯಾನ್ ಸೆಕ್ಷನ್ ನಲ್ಲಿ ಮೆಕಾನಿಕ್ ಆಗಿ ಸೇವೆ ಸಲ್ಲಿಸುತ್ತಿದ್ದನು. ಈತನ ಕುಟುಂಬ ಆಂಧ್ರದಲ್ಲಿದ್ದು, ಈತ ಮಾತ್ರ ಕೊಳ್ಳೇಗಾಲದ ಕುಂತೂರು ಸರ್ಕಲ್ ಬಳಿಯಿರುವ ಹಳೆಯ ಪ್ರಭುದೇವ ಟೂರಿಂಗ್ ಟಾಕೀಸ್ ಬಳಿ ರೂಂಮೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದನು.
ಅತಿಯಾದ ಮದ್ಯ ಸೇವಿಸಿದ್ದ ಈತ ಮದ್ಯರಾತ್ರಿ ಎದ್ದು ಶೌಚಾಲಯಕ್ಕೆ ತೆರಳಿದ್ದನು. ಈ ವೇಳೆ ಕಾಲು ಜಾರಿದ್ದರಿಂದ ನೆಲಕ್ಕೆ ಬಿದ್ದಿದ್ದರಿಂದ ಬಲವಾದ ಪೆಟ್ಟು ಬಿದ್ದಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿಷಯ ತಿಳಿದ ಮನೆಯ ಮಾಲಿಕರು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಮಹಜರು ನಡೆಸಿ ಶವದ ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ, ಶವವನ್ನು ವಾರಸುದಾರರಿಗೆ ನೀಡಿದ್ದಾರೆ.