ಚಿಕ್ಕಮಗಳೂರು:ಬಾಬಾಬುಡಾನ್ ಗಿರಿ ದರ್ಗಾದಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಮಾ.13, 14 ಮತ್ತು 15 ರಂದು ಉರುಸ್ ಆಚರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಪಿಎಫ್ಐ ವಲಯ ಅಧ್ಯಕ್ಷ ಜಮೀರ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
2015ರ ಸೆ.3ರಂದು ಸುಪ್ರಿಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ ರಾಜ್ಯ ಸರ್ಕಾರ ತಮ್ಮ ನಿರ್ಧಾರವನ್ನು ಅದಷ್ಟು ಬೇಗ ಪ್ರಕಟಿಸಬೇಕು. ರಾಜ್ಯ ಸರ್ಕಾರದ ನಿರ್ಧಾರ ಆಗುವವರೆಗೂ 2008ರ ನ್ಯಾಯಾಲಯದ ಆದೇಶದಂತೆ 1999 ಫೆ.25 ರ ಮುಜರಾಯಿ ಕಮೀಷನರು ನೀಡಿರುವ ವರದಿ ಪ್ರಕಾರ ನಮಗೆ ಉರುಸ್ ಆಚರಿಸಲು ಅನುಮತಿ ಕೊಡಬೇಕು.
ಮುಜರಾಯಿ ಮ್ಯಾನುಯಲ್ ಪ್ರಕಾರ ಪುಟ ಸಂಖ್ಯೆ 556, ಉರುಸ್ ಎಂದರೆ ಗೋರಿಗಳನ್ನು ಹಸಿರು ಬಟ್ಟೆ ಹಾಗೂ ಹೂವು ಸುವಾಸನೆ ದ್ರವ್ಯ ಹಾಕಿ ಅಲಂಕರಿಸಿ ಉರುಸ್ ಆಚರಿಸುತ್ತಾರೆ. ಇದೇ ರೀತಿ 2005 ರ ಇಸವಿವರೆಗೆ ಶಾಖಾದ್ರಿ ನೇತೃತ್ವದಲ್ಲಿ ಹಸಿರು ಬಟ್ಟೆ ಹಾಕಿ ಹಸಿರು ಧ್ವಜವನ್ನು ಬಾಬಾಬುಡನ್ ಗಿರಿ ದರ್ಗಾದ ಆವರಣದಲ್ಲಿ ಉರುಸ್ ಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಹಲವು ಕಡೆ ಬಾಬಾಬುಡಾನ್ ಗಿರಿಗೆ ತೆರಳುವ ರಸ್ತೆಯ ಸೂಚನಾ ನಾಮಫಲಕಗಳನ್ನು ದತ್ತಪೀಠ ಎಂದು ಕಾನೂನುಬಾಹಿರವಾಗಿ ತಿದ್ದಿದ್ದಾರೆ. ಕಾನೂನಿನ ಪ್ರಕಾರ ಶ್ರೀದತ್ತತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಉರುಸಿನ ಮುಂಚಿತವಾಗಿ ಸರಿಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.