ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಬರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗುತ್ತಿರುವುದರಿಂದ ಬೇಸತ್ತ ರೈತರು ತಮ್ಮಲ್ಲಿರುವ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವು ಮಧ್ಯವರ್ತಿಗಳು ಸಂತೆಗೆ ತೆರಳಿ ಕಡಿಮೆ ಬೆಲೆಗೆ ಜಾನುವಾರುಗಳನ್ನು ಖರೀದಿಸಿ ಕೇರಳದ ಕಸಾಯಿಖಾನೆಗೆ ಸಾಗಿಸುವ ದಂಧೆಯನ್ನು ನಡೆಸುತ್ತಿದ್ದಾರೆ.
ಈಗಾಗಲೇ ಇಲ್ಲಿನ ಬಹುತೇಕ ಜಾನುವಾರುಗಳು ಕೇರಳ ಸೇರಿದ್ದು, ಕೆಲವೇ ಕೆಲವು ಪ್ರಕರಣ ಮಾತ್ರ ಬೆಳಕಿಗೆ ಬರುತ್ತಿದೆ. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಂತೆಯಲ್ಲಿ ಕಡಿಮೆ ಬೆಲೆಗೆ 9 ಜಾನುವಾರುಗಳನ್ನು ಖರೀದಿಸಿ ಬಳಿಕ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದ ತೆರಕಣಾಂಬಿ ಹಾಗೂ ಜಿಲ್ಲಾ ಅಪರಾಧ ತಡೆ ವಿಭಾಗದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಿಸಿದ್ದಾರೆ.
ತೆರಕಣಾಂಬಿಯಲ್ಲಿ ದನಗಳ ಸಂತೆ ನಡೆಯುತ್ತಿದ್ದು, ಇಲ್ಲಿಗೆ ಅಸಹಾಯಕ ರೈತರು ತಮ್ಮ ಜಾನುವಾರುಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ. ಮೇವಿಗೆ ತೊಂದರೆಯಿರುವ ಕಾರಣ ರೈತರು ಖರೀದಿಸುತ್ತಿಲ್ಲ. ಹೀಗಾಗಿ ಸಂತೆಗೆ ತಂದ ದನಗಳನ್ನು ಕಡಿಮೆ ಬೆಲೆಗೆ ಅಸಹಾಯಕ ರೈತರು ನೀಡುವುದು ಅನಿವಾರ್ಯವಾಗಿದೆ. ಇದನ್ನೇ ದುರುಪಯೋಗಪಡಿಸಿಕೊಂಡ ಕೆಲವವರು ಕಡಿಮೆ ಬೆಲೆಗೆ ಖರೀದಿಸಿ ಬಳಿಕ ಕೇರಳಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಗುಂಡ್ಲುಪೇಟೆ ನಿವಾಸಿಗಳಾದ ಇರ್ಫಾನ್ ಮತ್ತು ಸದ್ಧಾಂ ಎಂಬಿಬ್ಬರು 9 ಜಾನುವಾರುಗಳನ್ನು ಖರೀದಿಸಿ ಅವುಗಳನ್ನು ತಮ್ಮ ವಾಹನದಲ್ಲಿ ಕೇರಳಕ್ಕೆ ಅಕ್ರಮವಾಗಿ ಸಾಗಿಸಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ತೆರಕಣಾಂಬಿ ಹಾಗೂ ಚಾಮರಾಜನಗರ ಜಿಲ್ಲಾ ಅಪರಾಧ ತಡೆ ವಿಭಾಗದ ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿ ಎರಡು ವಾಹನಗಳನ್ನು ವಶಕ್ಕೆ ಪಡೆದು ಅದರಲ್ಲಿದ್ದ 9 ಜಾನುವಾರುಗಳನ್ನು ರಕ್ಷಿಸಿ ಅವುಗಳನ್ನು ಮೈಸೂರಿನ ಪಿಂಜರಾ ಪೋಲಿಗೆ ಸಾಗಿಸಿದ್ದಾರೆ. ಆರೋಪಿಗಳಾದ ಇರ್ಫಾನ್, ಸದ್ದಾಂ ಎಂಬ ಚಾಲಕರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ತಡೆ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ಮಹದೇವಶೆಟ್ಟಿ, ಸಹಾಯಕ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿ ಎಚ್.ಡಿ.ಸ್ವಾಮಿ, ಎಚ್.ವಿ.ರವಿ, ಸಿದ್ದಮಲ್ಲಶೆಟ್ಟಿ, ಜಯಪ್ರಕಾಶ್ ಭಾಗವಹಿಸಿದ್ದರು.