ಮಡಿಕೇರಿ: ಕೊಡಗಿನ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳು ಸೇರಿದಂತೆ ಕೊಡವ ಕುಟುಂಬಗಳ ಹಿರಿಮನೆಯಾದ ಐನ್ಮನೆಯ ಮಾದರಿಯನ್ನು ಬಿಂಬಿಸುವಂತಹ ಕೊಡವ ಹೆರಿಟೇಜ್ ಸೆಂಟರ್ ನ ನಿರ್ಮಾಣದ ಕನಸು ಸದ್ಯದ ಮಟ್ಟಿಗೆ ನನಸಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲೇ ನಿರ್ಮಾಣಗೊಂಡು ಪ್ರವಾಸೋದ್ಯಮಕ್ಕೆ ಕೊಡುಗೆಯಾಗುತ್ತಿತ್ತು. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು, ಕಳಪೆ ಕಾಮಗಾರಿ, ಜನಪ್ರತಿನಿಧಿಗಳ ಇಚ್ಚಾಸಕ್ತಿಯ ಕೊರತೆಯ ಕಾರಣಗಳಿಂದಾಗಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರ ಅರ್ಧಕ್ಕೆ ಕೈಬಿಟ್ಟಿರುವುದರಿಂದಾಗಿ ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಕಟ್ಟಡದ ವಸ್ತುಗಳು ಕಳ್ಳರ ಪಾಲಾದರೆ, ನಿರ್ಮಾಣಗೊಂಡ ಕಟ್ಟಡದ ಭಾಗಗಳು ಗಾಳಿ ಮಳೆಗೆ ಸಿಲುಕಿ ಶಿಥಿಲಾವಸ್ಥೆಗೆ ತಲುಪಿವೆ.
ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ಪ್ರವಾಸಿಗರಿಗೆ ತಿಳಿಸುವ ಸಲುವಾಗಿ 2009-10ರಲ್ಲಿ ಕೊಡವ ಐನ್ ಮನೆ ಮಾದರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಯಿತು. ಐನ್ ಮನೆ, ಸಭಾಂಗಣ, ಒಳಾಂಗಣದಲ್ಲಿ ಪುಟ್ಟ ಕೊಳ, ತೆರೆದ ಸಭಾಂಗಣ, ಗ್ರಂಥಾಲಯ, ಹಳೇ ವಸ್ತುಗಳ ಸಂಗ್ರಹಾಲಯ, ಕುಡಿಯುವ ನೀರು ಇನ್ನಿತರ ವ್ಯವಸ್ಥೆಗಳೊಂದಿಗೆ ಗ್ರಾಮೀಣ ಸೊಗಡನ್ನು ಪಸರಿಸುವುದು ಕೊಡವ ಹೆರಿಟೇಜ್ ನ ಉದ್ದೇಶವಾಗಿತ್ತು. ಈ ಯೋಜನೆಯ ಮೊದಲ ಹಂತವಾಗಿ 1.45 ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಲಾಯಿತಾದರೂ ಬಳಿಕ ಮರುಪರಿಶೀಲಿಸಿ 2.68 ಕೋಟಿ ರೂ.ಗೆ ಏರಿಸಿ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಯಿತು. ಪ್ರವಾಸೋದ್ಯಮ ಇಲಾಖೆಯ ಮೂಲಕ ನಬಾರ್ಡ್ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿಯ ಮುಂದಾಳತ್ವ ವಹಿಸಿತ್ತು.
ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣಕ್ಕಾಗಿ ಮಡಿಕೇರಿ ನಗರದ ಹೊರವಲಯದ ಕರವಲೆ ಬಾಡಗ ಗ್ರಾಮದ 4 ಎಕರೆ ಪ್ರದೇಶವನ್ನು ಗುರುತಿಸಲಾಯಿತು. ಈ ಜಾಗದಲ್ಲಿ ನೆಲೆಸಿದ್ದ ಬಡ ಕುಟುಂಬಗಳನ್ನು ತೆರವುಗೊಳಿಸಿ 2011ರ ಸೆ.21 ರಂದು ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಒಪ್ಪಂದದ ಪ್ರಕಾರ ಗುತ್ತಿಗೆದಾರ ಕಾಮಗಾರಿಯನ್ನು 2012ರ ಸೆ.21ಕ್ಕೆ ಪೂರ್ಣಗೊಳಿಸಿ ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕಾಗಿತ್ತು. ಆದರೆ, ಆರಂಭದಲ್ಲಿ ಕಾಮಗಾರಿ ಚುರುಕಾಗಿ ನಡೆಯಿತಾದರೂ ಶೇ.70 ರಷ್ಟು ಕಾಮಗಾರಿ ನಡೆದು ಬಳಿಕ ನೆನೆಗುದಿಗೆ ಬಿದ್ದಿತು. ಪರಿಣಾಮ ಕಳೆದ ಐದು ವರ್ಷಗಳಿಂದ ಕುರುಚಲು ಕಾಡು ಬೆಳೆದು, ಕಟ್ಟಡ ಶಿಥಿಲಾವಸ್ಥೆಗೆ ತಲುಪುವಂತಾಗಿದೆ.
ಹಾಗೆ ನೋಡಿದರೆ ಯೋಜನೆಗೆ ಆಯ್ಕೆ ಮಾಡಿಕೊಂಡ ಜಾಗವು ಸುಂದರ ಪರಿಸರದಲ್ಲಿದೆ. ಕರವಲೆ ಬಾಡಗ ಗ್ರಾಮದ ಗುಡ್ಡ ಪ್ರದೇಶದಲ್ಲಿರುವ ಈ ಕೊಡವ ಹೆರಿಟೇಜ್ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಈಗಾಗಲೇ ಶೇ. 70ರಷ್ಟು ಪೂರ್ಣಗೊಂಡಿರುವ ಕಟ್ಟಡ ಯೋಗ್ಯವಾಗಿದೆಯಾ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಕಾರಣ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ ಗೋಡೆ ಹಾಗೂ ಮೆಟ್ಟಿಲಿನ ಕಾಮಗಾರಿ ಗುಣಮಟ್ಟವಿಲ್ಲದೆ ಕಳಪೆಯಾಗಿದೆ. ಅಷ್ಟೇ ಅಲ್ಲದೆ ಯಾವುದೇ ರೂಪುರೇಷೆಗಳಿಲ್ಲದ ಕಾಮಗಾರಿ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಈ ಹಿಂದೆ ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಮುಂದುವರೆಸಲು ಹಿಂದೇಟು ಹಾಕಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿದ್ದು ಇದೀಗ ಲೋಕೋಪಯೋಗಿ ಇಲಾಖೆ ಮರು ಟೆಂಡರ್ ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಕೊಡವ ಹೆರಿಟೇಜ್ ಯೋಜನೆ ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದರೂ ಕೊಡವ ಅಕಾಡೆಮಿಯಾಗಲೀ, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಸೊಲ್ಲೆತ್ತದಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು ಮುಂದೆಯಾದರೂ ಉತ್ತಮ ಗುಣಮಟ್ಟದ ಕಾಮಗಾರಿ ನಡೆದು ಉದ್ದೇಶಿತ ಯೋಜನೆ ಸಾಕಾರಗೊಳ್ಳುವ ಮೂಲಕ ಸಾರ್ವಜನಿಕ ಸೇವೆಗೆ ಕೊಡವ ಹೆರಿಟೇಜ್ ಲಭ್ಯವಾಗಲಿ ಎಂಬುದು ಜನತೆಯ ಆಶಯವಾಗಿದೆ.