ಮಡಿಕೇರಿ: ನಗರದ ಕೋಟೆ ಆವರಣದಲ್ಲಿ ಮತ್ತು ಅರಮನೆಯೊಳಗೆ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳನ್ನು ತೆರವುಗೊಳಿಸುವಂತೆ ಪುರಾತತ್ವ ಇಲಾಖೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಈಗಾಗಲೇ ಇಲ್ಲಿರುವ ಸರ್ಕಾರಿ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಕಾರ್ಯ ಭರದಿಂದ ಸಾಗಿದ್ದು ಅದರಂತೆ ಈಗ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಲಯವನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ.
ಹೀಗಾಗಿ ನ್ಯಾಯಾಲಯಗಳ ಸಮುಚ್ಚಯದ ಮೂರು ಅಂತಸ್ತಿನ ಕಟ್ಟಡವನ್ನು ನೂತನವಾಗಿ ಮಡಿಕೇರಿ ನಗರದ ಹೊರವಲಯದ ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿಗೊಳಪಡುವ ವಿದ್ಯಾನಗರದ ಹಳೇ ಪುಟಾಣಿ ರೈಲಿದ್ದ ಸ್ಥಳದಿಂದ ಅನತಿ ದೂರದಲ್ಲಿ ಒಟ್ಟು 4.60 ಎಕರೆ ಪ್ರದೇಶದಲ್ಲಿ 36.70 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ನ್ಯಾಯಾಲಯಗಳ ಸಮುಚ್ಚಯದ ಕಾಮಗಾರಿ 2017 ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಕೋಟೆಯಾವರಣದೊಳಗೆ ಪ್ರಸ್ತುತ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವ ಕಟ್ಟಡವನ್ನು 1969 ರಿಂದ 1974 ರಲ್ಲಿ ನಿರ್ಮಿಸಿದ್ದಾಗಿದೆ, 18-11-1969ರಲ್ಲಿ ಮೈಸೂರು ಚೀಫ್ ಜಸ್ಟೀಸ್ ಎ.ಆರ್.ಸೋಮನಾಥ ಅಯ್ಯರ್ ಅವರು ಈ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು, ಆಗ ಕರ್ನಾಟಕ ಸರಕಾರದಲ್ಲಿ ಪುಟ್ಟಸ್ವಾಮಿ ಅವರು ಕಾನೂನು ಸಚಿವರಾಗಿದ್ದರು.
ಕಟ್ಟಡ ಕಾಮಗಾರಿ ಪೂರ್ಣಗೊಂಡು 7-12-1974ರಲ್ಲಿ ಕರ್ನಾಟಕದ ಆಗಿನ ಚೀಫ್ ಜಸ್ಟೀಸ್ ಜಿ.ಕೆ.ಗೋವಿಂದ ಭಟ್ ಅವರು ನ್ಯಾಯಾಲಯವನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಪ್ರಸ್ತುತ ಮುಂದುವರೆಯುತ್ತಿರುವ ನ್ಯಾಯಾಲಯವನ್ನು ತೆರವುಗೊಳಿಸುವಂತೆ ಈಗಾಗಲೇ ಪುರಾತತ್ವ ಇಲಾಖೆ ಸೂಚಿಸಿದ್ದರಿಂದ ಸ್ಥಳಾಂತರಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ನೂತನ ನ್ಯಾಯಾಲಗಳ ಸಮುಚ್ಚಯವನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ನಗರದ ಹೊರವಲಯದ ಪ್ರಶಾಂತ ವಲಯದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದೀಗ ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯದ ಕಟ್ಟಡದ ಕಾಮಗಾರಿಗೆ 2014ರ ಮಾರ್ಚ್ 4 ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿತ್ತು. ನ್ಯಾಯಾಲಯ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಬೆಂಗಳೂರಿನ ಕೆ.ಬಿ.ಆರ್.ಇನ್ಫ್ರಾಶ್ಚರರ್ ಸಂಸ್ಥೆಯು ಟೆಂಡರ್ ಪಡೆದುಕೊಂಡು ಕಾಮಗಾರಿಯನ್ನು ಆರಂಭಿಸಿದ್ದರು.
2016ರ ಮಾರ್ಚ್ 3ಕ್ಕೆ ಕಟ್ಟಡದ ಕಾಮಗಾರಿಯನ್ನು ಮುಗಿಸಿ ನ್ಯಾಯಾಲಯ ಕಲಾಪಗಳು ನಡೆಯಲು ಗುತ್ತಿಗೆದಾರ ಬಿಟ್ಟುಕೊಡಬೇಕಾಗಿತ್ತು, ಆದರೆ ಕೆಲವು ತಾಂತ್ರಿಕ ಅಡೆತಡೆಗಳಿಂದ ಸಾಧ್ಯವಾಗಲಿಲ್ಲ. ಆದರೂ ಪ್ರಸಕ್ತ ಸಾಲಿನ 2017ರ ಜುಲೈ 31ಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಮೂರು ಅಂತಸ್ತಿನ ನೂತನ ನ್ಯಾಯಾಲಯದ ಕಟ್ಟಡದಲ್ಲಿ ಒಟ್ಟು 30 ಕೊಠಡಿಗಳು, 9 ಕೋರ್ಟ್ ಹಾಲ್ ಗಳಿರುತ್ತವೆ, ಪ್ರತ್ಯೇಕವಾದ ಏರಿಯಾ ಸೆಂಟರ್ ಗಳಿರುತ್ತವೆ. ಅಲ್ಲದೆ, ಮುಖ್ಯವಾಗಿ ನಾಲ್ಕು ನ್ಯಾಯಾಲಯಗಳು, ಫಾಸ್ಟ್ ಟ್ರಾಕ್ ನ್ಯಾಯಾಲಯ ಸೇರಿದಂತೆ ಇತರ ವಿಭಾಗಗಳು ಸೇರಿವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿವಿಧ ಕಚೇರಿಗಳು, ವಿಭಾಗಗಳು ಇರಲಿವೆ.
ಈಗಾಗಲೇ ನೆಲ ಅಂತಸ್ತಿನ ಕಾಮಗಾರಿ ಮುಗಿದಿದ್ದು, ಇನ್ನುಳಿದ ಮೇಲಿನ ಅಂತಸ್ತುಗಳ ಕಾಮಗಾರಿ ಬಿರುಸಿನಿಂದ ಸಾಗಿದ್ದು ಜುಲೈ ಅಂತ್ಯಕ್ಕೆ ಸಂಪೂರ್ಣಗೊಳಿಸುವ ಸಾಧ್ಯತೆಯಿದೆ.
ನಗರದ ಹೊರವಲಯದಲ್ಲಿ ನ್ಯಾಯಾಲಯ ನಿರ್ಮಾಣವಾಗಿರುವುದರಿಂದ ವಾಹನಗಳ ಸಂಚಾರ ಸಮಸ್ಯೆ, ಜನಜಂಗುಳಿ ಎಲ್ಲದಕ್ಕೂ ತಡೆಬೀಳಲಿದ್ದು, ಕೋಟೆ ಆವರಣ ಪ್ರಶಾಂತವಾಗಲಿದೆ.