ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಣೆ ಮಾಡಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಈ ಸಂಬಂಧ ವರಿಷ್ಠರನ್ನು ಜಿಲ್ಲೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಜಿಲ್ಲಾಧ್ಯಕ್ಷರ ಬದಲಾವಣೆ ಪುನರ್ ಪರಿಶೀಲಿಸುವಂತೆ ಒತ್ತಾಯಿಸುವ ಸಲುವಾಗಿ ತೆರಳಿದ ನಿಯೋಗಕ್ಕೆ ಅವರು ಮೇಲ್ಕಂಡಂತೆ ಉತ್ತರ ನೀಡಿದ್ದು, ಜಿಲ್ಲಾಧ್ಯಕ್ಷರ ಬದಲಾವಣೆಗೊಳಿಸುವಂತೆ ಒತ್ತಡ ಬಂದ ಹಿನ್ನಲೆಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗಿತ್ತು. ಅಲ್ಲದೆ ಜಿಲ್ಲಾಧ್ಯಕ್ಷರಾಗಿದ್ದ ಮನುಮುತ್ತಪ್ಪ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಸ್ಥಾನ ನೀಡುವುದಾಗಿಯೂ ತಿಳಿಸಿದ್ದಾರೆ.
ಕೇವಲ ಅಧ್ಯಕ್ಷರ ಬದಲಾವಣೆ ಮಾತ್ರ ಮಾಡಲಾಗಿದ್ದು, ಉಳಿದಂತೆ ಇತರ ಮೋರ್ಚಾ, ಘಟಕಗಳ ಪದಾಧಿಕಾರಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಮತ್ತು ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳಿಗೆ ಪಕ್ಷದ ಟಿಕೇಟ್ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಅವರ ಗೆಲುವಿಗೆ ಶ್ರಮಿಸುವಂತೆಯೂ ನಿಯೋಗಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಮನುಮುತ್ತಪ್ಪ ಅಧ್ಯಕ್ಷರಾಗಿದ್ದ ಸಮಯದಲ್ಲಿ ಎಪಿಎಂಸಿ ಚುನಾವಣೆ ನಡೆದಿದ್ದು, ಹೆಚ್ಚಿನ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಸಂಘಟನೆಯಲ್ಲಿಯೂ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಹೇಳುವ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದರೂ ಬಿ.ಎಸ್.ಯಡಿಯೂರಪ್ಪ ಅದಕ್ಕೆ ಯಾವುದೇ ಸೊಪ್ಪು ಹಾಕಿಲ್ಲ.
ರಾಜ್ಯಮಟ್ಟದಲ್ಲಿ ಈಶ್ವರಪ್ಪ ಹಾಗೂ ಕೇಂದ್ರದ ಕೆಲ ನಾಯಕರ ಅಪೇಕ್ಷೆಯಂತೆ ಕೆಲವೊಂದು ಜಿಲ್ಲೆಗಳ ಅಧ್ಯಕ್ಷರನ್ನು ಬದಲಾಯಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಇತರ ಮುಖಂಡರಿಗೂ ತಿಳಿಸಲಾಗಿದೆ. ಈ ನಿಯೋಜನೆಯಲ್ಲಿ ಮತ್ತೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನಿಯೋಗದ ಬೇಡಿಕೆಯನ್ನು ನಯವಾಗಿ ತಳ್ಳಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲೆಯ ನಾಯಕರಲ್ಲಿರು ಗೊಂದಲಗಳನ್ನು ಪರಿಹರಿಸಿ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಶೀಘ್ರದಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರನ್ನು ಕೊಡಗಿಗೆ ಕಳುಹಿಸಿ ಕೊಡುವ ಬಗ್ಗೆ ಅವರು ಇದೇ ಸಂದರ್ಭ ತಿಳಿಸಿದ್ದಾರೆ.
ನಿಯೋಗದಲ್ಲಿ ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೂರ್ಣಿಮಾ ಗೋಪಾಲ್ ಹಾಗೂ ಸರೋಜಮ್ಮ ಹೊರತುಪಡಿಸಿ ಬಿಜೆಪಿಯ ಎಲ್ಲಾ ಜಿ.ಪಂ. ಸದಸ್ಯರು, ಮಡಿಕೇರಿ ತಾ.ಪಂ. ಅಧ್ಯಕ್ಷರು, ಸದಸ್ಯರುಗಳು, ಪಕ್ಷದ ಮುಖಂಡರುಗಳಾದ ವಿ.ಕೆ. ಲೋಕೇಶ್, ಬಾಲಚಂದ್ರ ಕಳಗಿ, ಎಂ.ಎನ್. ಕೊಮಾರಪ್ಪ, ತಳೂರು ಕಿಶೋರ್ ಕುಮಾರ್, ರವಿ ಬಸಪ್ಪ, ಕಾಳನ ರವಿ, ಡೀನ್ ಬೋಪಣ್ಣ, ಪ್ರಸನ್ನ, ದೀಪಕ್, ಮಂಜುಳಾ ಸೇರಿದಂತೆ 33 ಮಂದಿ ಪಕ್ಷದ ಮುಂಚೂಣಿ ಘಟಕದ ನಾಯಕರು ತೆರಳಿದ್ದರು. ಆದರೆ ಪಕ್ಷದ ಹಿರಿಯ ಮುಖಂಡರು ತೆರಳಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಮನುಮುತ್ತಪ್ಪ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಪಕ್ಷದ ಜಿಲ್ಲಾ ಮುಖಂಡರಲ್ಲಿ ಹಿಂದಿನಿಂದಲೂ ಅಸಮಾಧಾನವಿತ್ತು. ಅವರೆಲ್ಲರ ಒತ್ತಡದಿಂದ ಮನುಮುತ್ತಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿದೆ ಎನ್ನಲಾಗುತ್ತಿದೆ.
ಆದರೆ ಮನುಮುತ್ತಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಗೊಳಿಸಿದರೆ ತಮಗೆ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ನಂಬಿದ್ದ ಕೆಲವು ಆಕಾಂಕ್ಷಿಗಳಿಗೆ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಭಾರತೀಶ್ ಅವರಿಗೆ ಅಧ್ಯಕ್ಷ ಗಾದಿ ನೀಡಿರುವುದು ನಿರಾಸೆಯಾಗಿದೆ. ಆದರೆ ಮನುಮುತ್ತಪ್ಪ ಅವರನ್ನು ಅಧ್ಯಕ್ಷಗಾದಿಯಿಂದ ಕೆಳಗಿಳಿಸಿದ ನೆಮ್ಮದಿ ಅವರಿಗಿದೆ ಎಂದರೆ ತಪ್ಪಾಗಲಾರದು. ಇದೆಲ್ಲದರ ನಡುವೆ ನಿರಾಯಾಸವಾಗಿ ಅಧ್ಯಕ್ಷ ಸ್ಥಾನ ಒದಗಿ ಬಂದಿದಕ್ಕೆ ಭಾರತೀಶ್ ಖುಷಿಯಾಗಿದ್ದಾರೆ. ಅವರು ಯಾವತ್ತೂ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ತಮ್ಮ ಪಾಡಿಗೆ ತಾವು ಎಂಬಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.