ಮಡಿಕೇರಿ: ಕಾಮಾಲೆ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೇರಳದ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ನಾಪೋಕ್ಲು ಸಮೀಪದ ಚೆರಿಯಪರಂಬುವಿನ ನಿವಾಸಿ, ದುಬೈನಲ್ಲಿ ಉದ್ಯೋಗದಲ್ಲಿರುವ ಸೈನುದ್ದೀನ್ ಎಂಬವರ ಪತ್ನಿ ಶಬಾನ (21) ಮೃತಪಟ್ಟ ಮಹಿಳೆ. ಈಕೆ ನಾಪೋಕ್ಲು ಸಮೀಪದ ಕಲ್ಲುಮೊಟ್ಟೆಯ ಮೈದು ಅವರ ಪುತ್ರಿಯಾಗಿದ್ದು ಎರಡು ವರ್ಷಗಳ ಹಿಂದೆ ಚೆರಿಯಪರಂಬುವಿನ ಅಹಮ್ಮದ್ ಅವರ ಪುತ್ರ ಸೈನುದ್ದೀನ್ ಜತೆ ಮದುವೆಯಾಗಿತ್ತು. ಮದುವೆ ಬಳಿಕ ಸೈನುದ್ದೀನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಮಗು ಚೆರಿಯಪರಂಬುನಲ್ಲೇ ಇದ್ದರು.
ಕೆಲವು ದಿನಗಳ ಹಿಂದೆ ಶಬಾನ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಗೆ ತೋರಿಸಲಾಗಿತ್ತು. ಆಗ ರಕ್ತ ಪರೀಕ್ಷೆ ಮಾಡಿಸಲಾಗಿತ್ತು. ಅದರ ವರದಿಯಲ್ಲಿ ಜಾಂಡೀಸ್ ಇರುವುದು ಪತ್ತೆಯಾಗಿತ್ತು. ಇದಕ್ಕೆ ಹಸಿರು ಔಷಧಿ ಕೊಡಿಸಿದ್ದರು. ಆದರೆ ಫಲಕಾರಿಯಾಗದೆ ಉಲ್ಭಣಗೊಂಡಿದ್ದರಿಂದ ಮತ್ತೆ ಪರೀಕ್ಷೆ ಮಾಡಿಸಿದಾಗ ರೋಗ ಲಿವರ್, ಕಿಡ್ನಿ ಮತ್ತು ಮೆದುಳಿಗೆ ಹರಡಿದ್ದು ಪತ್ತೆಯಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಶಬಾನಳನ್ನು ಮಡಿಕೇರಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಲ್ಲ ಎಂದು ಹೇಳಿದ್ದರಿಂದ ಕೇರಳದ ಕೋಯಿಕೋಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅಲ್ಲೂ ಚಿಕಿತ್ಸೆ ನೀಡುವುದು ಸಾಧ್ಯವಾಗದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗೆ ಕ್ಯಾಲಿಕಟ್ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗದೆ ಶಬಾನ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಒಂದು ವರ್ಷದ ಮಗು ತಾಯಿ ಕಳೆದುಕೊಂಡು ತಬ್ಬಲಿಯಾಗಿದೆ.
ಕಳೆದ ಎರಡು ತಿಂಗಳಿನಿಂದ ಕಾಡಿದ್ದ ಕಾಮಾಲೆ ಹೋಯಿತು ಎಂದು ಜನ ನೆಮ್ಮದಿ ಪಡುವ ವೇಳೆಗೆ ಮತ್ತೆ ಮಹಿಳೆ ಜಾಂಡೀಸ್ಗೆ ಬಲಿಯಾಗಿರುವುದು ಇಲ್ಲಿನ ಜನರಲ್ಲಿ ಭಯಹುಟ್ಟಿಸಿದೆ