ಸುಳ್ಯ: ಉತ್ತಮ ಮತ್ತು ಸಂಸ್ಕಾರಯುತ ಕುಟುಂಬ ವ್ಯವಸ್ಥೆಯಿಂದ ಭಾರತವು ವಿಶ್ವದಲ್ಲಿಯೇ ಭಿನ್ನವಾಗಿದೆ ಮತ್ತು ಬಲಿಷ್ಠ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ ಎಂದು ಆರ್ ಎಸ್ಎಸ್ ಅಖಿಲ ಭಾರತೀಯ ಕುಟುಂಬ ಪ್ರಭೋದನ್ ಮುಖ್ಯಸ್ಥರಾದ ಸು.ರಾಮಣ್ಣ ಹೇಳಿದರು.
ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಸುಳ್ಯದ ಓಡಬಾಯಿಯ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆದ ಕುಟುಂಬ ಪ್ರಭೋದನ್ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡಿದರು. ಕುಟುಂಬಗಳು ಸಮಾಜಕ್ಕೆ ಪ್ರೀಯವಾಗಬೇಕು. ಉತ್ತಮ ಕುಟುಂಬಗಳಿಂದ ಅಂತಕರಣ ಶುದ್ದಿ ಮತ್ತು ನೆಮ್ಮದಿ ಸಿಗುತ್ತದೆ. ಊರಿಗೆ ಮತ್ತು ದೇಶಕ್ಕೆ ಹಿತವಾದ ಕುಟುಂಬಗಳಿಂದ ಭಾರತ ಇನ್ನಷ್ಟು ಬಲಿಷ್ಠ ದೇಶವಾಗಿ ವಿಶ್ವ ಗುರುವಾಗಿ ಹೊರ ಹೊಮ್ಮಲಿದೆ. ಕುಟುಂಬಗಳಲ್ಲಿ ನೆಮ್ಮದಿ ಕಾಣಬೇಕಾದರೆ ದ್ವೇಷ, ಮತ್ಸರ ಮಾಯವಾಗಿ ಪ್ರೀತಿ ಹುಟ್ಟಬೇಕು.
ನಮ್ಮ ಸಂಸ್ಕೃತಿಯ ಆಚರಣೆಯಿಂದ ಮನೆಗಳಲ್ಲಿ ಪ್ರೀತಿ, ವಾತ್ಸಲ್ಯ ಹುಟ್ಟಿ ಕುಟುಂಬ ವ್ಯವಸ್ಥೆ ಸದೃಢವಾಗಲು ಸಾಧ್ಯ. ತುಳಸಿ ಸೇರಿದಂತೆ ವಿವಿಧ ಗಿಡಗಳನ್ನು ಮನೆಯಲ್ಲಿ ಬೆಳೆಸುವುದು, ತುಳಸಿ ಪೂಜೆ ಮಾಡುವುದು ಶೋಕಿಗಾಗಿ ಅಲ್ಲ, ಅದು ನಮ್ಮ ಸಂಸ್ಕೃತಿ. ಕತ್ತಲೆ ಅನ್ನುವುದು ಸುಳ್ಳು, ಬೆಳಕು ಅನ್ನುವುದು ಸತ್ಯ. ದೇವರ ಆರಾಧನೆ, ಪೂಜೆ ಎನ್ನುವುದು ಮೂಡನಂಬಿಕೆ ಅಲ್ಲ. ಇದು ಮೂಲನಂಬಿಕೆ ಎಂದ ಅವರು ಇವತ್ತಿನ ಕುಟುಂಬಗಳು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ನಮ್ಮ ದೇಶಿಯ ಸಂಸ್ಕೃತಿಯನ್ನು ದೇಶಿಯ ಉತ್ಪನ್ನಗಳನ್ನು ದೂರ ಮಾಡುತ್ತಿದ್ದೇವೆ. ಮಾತೃ ಭೋಜನದ ಕೊಂಡಿ ಕಳಚುತ್ತಿದೆ. ಮನೆಯಲ್ಲಿರುವ ಪ್ರೀತಿ, ವಾತ್ಸಲ್ಯ, ಮಮತೆ ದೂರವಾಗುತ್ತಿದೆ. ಇದು ಬದಲಾಗಿ ಮನೆ ಒಂದು ದೇವಾಲಯವಾಗಬೇಕು. ಆಗ ಅಂತರಂಗ ಶುದ್ದಿ ಮತ್ತು ಬಹಿರಂಗ ಶುದ್ದಿ ಆಗುತ್ತದೆ. ನಮ್ಮ ಭಾಷೆಯ ಮೇಲೆ ಅಭಿಮಾನ ಇರಬೇಕು.
ಭಾರತ ದೇಶ ಉಳಿದರೆ ಮಾತ್ರ ನಮ್ಮ ಮನೆ, ಜಾತಿ ಉಳಿಯುತ್ತದೆ ಎಂದು ಹೇಳಿದರು. ಮನೆಗಳು ಹೋಟೆಲ್ ನಂತೆ ಆಗಬಾರದು, ಹೋಟೆಲ್ ಗಳಲ್ಲಿ ಹಣ ನೀಡಿದರೆ ತಾತ್ಕಾಲಿಕ ಸುಖ, ಐಶ್ವರ್ಯ ಸಿಗುತ್ತದೆ ಅಷ್ಟೇ, ಆದರೆ ಮನೆಗಳಲ್ಲಿ ಸಿಗುವ ಸುಖ, ನೆಮ್ಮದಿ ಶಾಶ್ವತವಾದುದು. ಸಂಪತ್ತು, ಸೌಕರ್ಯದಿಂದ ನೆಮ್ಮದಿ ದೊರೆಯಲು ಸಾಧ್ಯವಿಲ್ಲ. ಉತ್ತಮ ಕುಟುಂಬದಿಂದ ಮಾತ್ರ ನೆಮ್ಮದಿ ದೊರೆಯಲು ಸಾಧ್ಯ. ದಂಪತಿಗಳು ಪಾರ್ವತಿ-ಪರಮೇಶ್ವರನಂತೆ ಮತ್ತು ಕುಟುಂಬ ಈಶ್ವರನ ಕುಟುಂಬದಂತೆ ಇರಬೇಕು ಎಂದು ಬಣ್ಣಿಸಿದ ಅವರು ನಂಬಿಕೆ ಮತ್ತು ಪ್ರೀತಿ ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ಶಾಸಕ ಎಸ್. ಅಂಗಾರ ಮತ್ತು ವೇದಾವತಿ ಎಸ್. ಅಂಗಾರ ದಂಪತಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್ ಎಸ್ಎಸ್ ತಾಲೂಕು ಸಂಘ ಚಾಲಕರಾದ ಚಂದ್ರಶೇಖರ್ ತಳೂರು ಮತ್ತು ಸತ್ಯವತಿ ಚಂದ್ರಶೇಖರ ತಳೂರು ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಗುಣವತಿ ಕೊಲ್ಲಂತ್ತಡ್ಕ ಸ್ವಾಗತಿಸಿ, ಉಪಾಧ್ಯಕ್ಷೆ ಅಂಬಾ ಬಾಯಿ ವಂದಿಸಿದರು. ಶ್ರೀದೇವಿ ನಾಗರಾಜ್ ಭಟ್ ನಿರೂಪಿಸಿದರು.