ಮಡಿಕೇರಿ: ತಮ್ಮನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಿ ಪಕ್ಷದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕೆಂದು ಪಕ್ಷದ ರಾಜ್ಯ ವರಿಷ್ಠರಲ್ಲಿ ಮನವಿ ಮಾಡಿಕೊಂಡಿರುವ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಭಿನ್ನಮತೀಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿಷ್ಕ್ರೀಯವಾಗಿದ್ದ ಜಾತ್ಯಾತೀತ ಜನತಾದಳವನ್ನು ಸಕ್ರಿಯಗೊಳಿಸಿದ ತಮ್ಮ ಪರಿಶ್ರಮವನ್ನು ಪರಿಗಣಿಸದ ಕೆಲವರು ಪಕ್ಷವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ಗೋಣಿಕೊಪ್ಪಲಿನಲ್ಲಿ ಸಭೆ ನಡೆಸಿದ ಕೆಲವರು ಜಿಲ್ಲಾಧ್ಯಕ್ಷರು ಜಿಲ್ಲಾ ಮಟ್ಟದ ಸಭೆ ನಡೆಸಲಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಈ ಹಿಂದೆ ಪಕ್ಷದ ನೇತೃತ್ವ ವಹಿಸಿದ್ದವರು ಎಷ್ಟು ಬಾರಿ ಸಭೆ ನಡೆಸಿದ್ದಾರೆ ಎಂದು ಸಂಕೇತ್ ಪೂವಯ್ಯ ಪ್ರಶ್ನಿಸಿದರು.
ಪಕ್ಷದೊಳಗೆ ಗೊಂದಲಗಳಿದ್ದಿದ್ದರೆ ತಮ್ಮ ಬಳಿ ಅಥವಾ ಪಕ್ಷದ ಮುಖಂಡರಾದ ಬಿ.ಎ.ಜೀವಿಜಯ ಅವರ ಬಳಿ ಹಂಚಿಕೊಳ್ಳಲು ಅವಕಾಶವಿತ್ತು. ಆದರೆ ಹೀಗೆ ಮಾಡದೆ ಗೊಂದಲವನ್ನು ಬಹಿರಂಗ ಪಡಿಸುವ ಮೂಲಕ ಬೇಸರ ಮೂಡಿಸಿದ್ದಾರೆ. ಆದ್ದರಿಂದ ಮುಂದಿನ ಮೂರು ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಪಕ್ಷದ ರಾಜ್ಯ ಸಮಿತಿಯಲ್ಲಿ ಸಕ್ರೀಯನಾಗಲು ತಾನು ತಯಾರಿದ್ದು, ಜಿಲ್ಲಾಧ್ಯಕ್ಷರಾಗಿಯೇ ಮುಂದುವರಿಯುವಂತೆ ವರಿಷ್ಠರು ಸೂಚಿಸಿದಲ್ಲಿ ಭಿನ್ನ ಮತೀಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಂಕೇತ್ ಪೂವಯ್ಯ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಕಾಂಗ್ರೆಸ್ ಪಕ್ಷ ಯಾವುದಕ್ಕೂ ಸ್ಪಂದಿಸದೆ ನಿಷ್ಕ್ರೀಯವಾಗಿದೆ. ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವುದರೊಂದಿಗೆ ಜಿಲ್ಲೆಯಲ್ಲಿ ಜೆಡಿಎಸ್ ಬೇರೂರುವಂತೆ ಮಾಡಲಾಗಿದೆ. ಪಕ್ಷ ಬೆಳೆದ ನಂತರ ನಿಷ್ಕ್ರೀಯರಾಗಿದ್ದವರೆಲ್ಲರೂ ಇದೀಗ ಇಲ್ಲಸಲ್ಲದ ಟೀಕೆಗಳನ್ನು ಮಾಡಿ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅಧಿಕಾರಕ್ಕಾಗಿ ಪಕ್ಷದ ಬೆಳವಣಿಗೆಯನ್ನು ಕುಂಠಿತಗೊಳಿಸುವವರನ್ನು ಸಹಿಸಲು ಸಾಧ್ಯವಿಲ್ಲವೆಂದ ಸಂಕೇತ್ ಪೂವಯ್ಯ, ಪಕ್ಷದ ಮೇಲೆ ಅಭಿಮಾನ ಉಳ್ಳವರು ಇಲ್ಲಿಯವರೆಗೆ ಎಷ್ಟು ಸದಸ್ಯತ್ವ ಅಭಿಯಾನ ಮಾಡಿದ್ದಾರೆ ಮತ್ತು ಎಷ್ಟು ಸಮಿತಿಗಳನ್ನು ರಚಿಸಿದ್ದಾರೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ 2 ಸ್ಥಾನಗಳಿಂದ 5 ಸ್ಥಾನಗಳಿಗೆ ಏರಿಕೆ ಕಂಡಿದೆ. ಶೇ.95 ರಷ್ಟು ಪಕ್ಷದ ಪದಾಧಿಕಾರಿಗಳು ತಮ್ಮೊಂದಿಗಿದ್ದು, ಕೆಲವರು ಮಾತ್ರ ಪಕ್ಷದಲ್ಲಿದ್ದುಕೊಂಡಂತೆ ನಟಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ವರಿಷ್ಠರು ತಮಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧರಿರುವುದಾಗಿ ಸಂಕೇತ್ ಪೂವಯ್ಯ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಕೈಗಾರಿಕಾ ಘಟಕದ ಅಧ್ಯಕ್ಷರಾದ ಕುಸುಮ್ ಕಾರ್ಯಪ್ಪ, ಪ್ರಮುಖರಾದ ಎಂ.ಎನ್. ಮಾಚಯ್ಯ, ಎಂ.ಸಿ. ದೇವಯ್ಯ, ಹೆಚ್.ಇ. ಗೋಪಾಲ್ ಹಾಗೂ ಪಿ.ವಿ. ರೆನ್ನಿ ಉಪಸ್ಥಿತರಿದ್ದರು.
ಫೋಟೋ :: ಜೆಡಿಎಸ್